‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ರೇಟಿಂಗ್ ಫ್ರೇಂವರ್ಕ್-2019’ (ಕೆ-ಎಸ್ಯುಆರ್ಎಫ್) ವರದಿಯಲ್ಲಿ ಹತ್ತು ವರ್ಷ ಮೇಲ್ಪಟ್ಟ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸಾವಿರ ಅಂಕಗಳ ಪೈಕಿ 841 ಮತ್ತು ಐದು ಸ್ಟಾರ್ ಪಡೆಯುವ ಮೂಲಕ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪ್ರಥಮ ಸ್ಥಾನ ಪಡೆದಿದೆ. 745 ಅಂಕಗಳು ಹಾಗೂ ನಾಲ್ಕು ಸ್ಟಾರ್ ಪಡೆಯುವ ಮೂಲಕ ಕೆಎಲ್ಇ ಶಿಕ್ಷಣ ಸಂಸ್ಥೆಯು ದ್ವಿತೀಯ ಸ್ಥಾನ ಪಡೆದಿದೆ.
ಉನ್ನತ ಶಿಕ್ಷಣ ಪರಿಷತ್ ಹಾಗೂ ಐ ಕೇರ್ ಸಂಸ್ಥೆ ಸಹಯೋಗದಲ್ಲಿ ಪ್ರಕಟಿಸಿರುವ ವರದಿಯಲ್ಲಿ ರಾಜ್ಯದ 43 ವಿಶ್ವವಿದ್ಯಾಲಯಗಳಿಗೆ ರ್ಯಾಂಕ್ ನೀಡಲಾಗಿದೆ. ವಿಶ್ವವಿದ್ಯಾಲಯಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸುವುದು ಹಾಗೂ ಸುಧಾರಣಾ ಕ್ರಮಗಳನ್ನು ವರದಿಯಲ್ಲಿ ತಿಳಿಸಲಾಗಿದೆ. ವರದಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಮಂಗಳವಾರ ಬಿಡುಗಡೆಗೊಳಿಸಿದರು.
10 ವರ್ಷ ಮೇಲ್ಪಟ್ಟ ವಿಶ್ವವಿದ್ಯಾಲಯ: 1.ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಮಣಿಪಾಲ. 2.ಕೆಎಲ್ಇ ವಿಶ್ವವಿದ್ಯಾಲಯ, ಬೆಳಗಾವಿ. 3.ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ. 4.ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. 5.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ.
ಯುವ ವಿಶ್ವವಿದ್ಯಾಲಯ: 1. ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾಲಯ, ಮೈಸೂರು. 2.ಜೈನ್ ವಿಶ್ವವಿದ್ಯಾಲಯ, ಬೆಂಗಳೂರು. 3. ನಿಟ್ಟೆವಿಶ್ವವಿದ್ಯಾಲಯ, ಮಂಗಳೂರು. 4.ಯನಪೋಯಾ ವಿಶ್ವವಿದ್ಯಾಲಯ, ಮಂಗಳೂರು. 5.ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು.
ವಿಶೇಷ ವಿಶ್ವವಿದ್ಯಾಲಯ: 1.ಧಾರವಾಡ ಕೃಷಿ ವಿವಿ. 2.ಬೆಂಗಳೂರು ಕೃಷಿ ವಿವಿ. 3.ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ. 4.ಎಸ್-ವ್ಯಾಸ, ಬೆಂಗಳೂರು. 5.ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ.
ಹೊಸ ವಿಶ್ವವಿವಿ : ಸಾವಿರ ಅಂಕಗಳಲ್ಲಿ 789 ಅಂಕಗಳು ಮತ್ತು ಐದು ಸ್ಟಾರ್ ಪಡೆಯುವ ಮೂಲಕ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯವು ಹೊಸ ವಿಶ್ವವಿದ್ಯಾಲಯಗಳ ಪೈಕಿ ಪ್ರಥಮ ರ್ಯಾಂಕ್ ಪಡೆದಿದೆ. ನಂತರದ ಸ್ಥಾನದಲ್ಲಿ ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ, ದಯಾನಂದ ಸಾಗರ್ ವಿಶ್ವವಿದ್ಯಾಲಯ ಮತ್ತು ಕೆಎಲ್ಇ ಟೆಕ್ನಾಲಜಿ ವಿಶ್ವವಿದ್ಯಾಲಯ ಸ್ಥಾನ ಪಡೆದಿವೆ.