ಬೆಂಗಳೂರು: ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ರಾಜ್ಯಕ್ಕೆ ಹೆಚ್ಚು ಕೋವಿಡ್ ಲಸಿಕೆ ಪೂರೈಸುವಂತೆ ಮನವಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸೋಮವಾರ ಅಥವಾ ಮಂಗಳವಾರ ದೆಹಲಿಗೆ ಪ್ರವಾಸ ಹೋಗಲಿದ್ದು, ಆ ವೇಳೆ ಕೋವಿಡ್ ಲಸಿಕೆ ಪೂರೈಕೆ ಬಗ್ಗೆ ಚರ್ಚಿಸಲಾಗುವುದು. ಕೇಂದ್ರ ಆರೋಗ್ಯ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ರಾಜ್ಯಕ್ಕೆ ಹೆಚ್ಚು ಲಸಿಕೆ ಪೂರೈಸಲು ಮನವಿ ಮಾಡಲಾಗುವುದು. ಆದರೆ ರಾಜ್ಯದಲ್ಲಿ ಲಸಿಕೆಯೇ ಇಲ್ಲ ಎಂದು ಎಲ್ಲೂ ಹೇಳಿಲ್ಲ. ಒಂದು ದಿನವೂ ಲಸಿಕೆ ಕೊರತೆಯಿಂದ ಲಸಿಕಾಕರಣ ಸ್ಥಗಿತಗೊಂಡಿಲ್ಲ. ಪ್ರತಿ ದಿನ 2 ರಿಂದ 3 ಲಕ್ಷ ಲಸಿಕೆ ನೀಡಲಾಗುತ್ತಿದೆ. ಸುಮಾರು 5 ಲಕ್ಷ ಲಸಿಕೆ ರಾಜ್ಯದಲ್ಲಿ ದಾಸ್ತಾನು ಇದೆ. ಕೇಂದ್ರದಿಂದ ಲಸಿಕೆ ಬಂದ ಕೂಡಲೇ ಹಂಚಿಕೆ ಮಾಡಲಾಗುತ್ತದೆ ಎಂದರು.