ಬೆಂಗಳೂರು: ನರೇಂದ್ರ ಮೋದಿಜಿ ಅವರ ನಾಯಕತ್ವದ ಆಡಳಿತ ಇರುವ ಭಾರತವನ್ನು ಈಗ ಅಂತರರಾಷ್ಟ್ರೀಯ ವಿಚಾರಗಳಲ್ಲಿ ಧ್ವನಿ ಇರುವ ಭ್ರಷ್ಟಾಚಾರ ರಹಿತ ಸಮರ್ಥ ರಾಷ್ಟ್ರ ಎಂದು ಗುರುತಿಸಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ವೃತ್ತಿಪರರ ಮತ್ತು ಚಿಂತಕರ ಸಭೆಯಲ್ಲಿ ಮಾತನಾಡಿದ ಅವರು, 9 ವರ್ಷಗಳ ಹಿಂದೆ ಕಾಂಗ್ರೆಸ್- ಯುಪಿಎ ಆಡಳಿತ ಇದ್ದಾಗ ನಮ್ಮ ದೇಶವನ್ನು ಅಸಮರ್ಪಕ ನೀತಿ, ಭ್ರಷ್ಟಾಚಾರ ಇರುವ ರಾಷ್ಟ್ರ ಎಂದು ಗುರುತಿಸಲಾಗುತ್ತಿತ್ತು. ನಾವು ಹಿಂಬಾಲಕರ ಸ್ಥಾನ ಹೊಂದಿದ್ದೆವು ಎಂದು ವಿವರಿಸಿದರು.
ಉಕ್ರೇನ್ ಯುದ್ಧ, ಕೋವಿಡ್ ಬಳಿಕ ವಿಶ್ವದ ಹಲವಾರು ದೇಶಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಆದರೆ, ಭಾರತವು ಸದೃಢ ರಾಷ್ಟ್ರವಾಗಿ ಮುನ್ನಡೆಯುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು. ಭಾರತದ ಜಿಡಿಪಿ ಬೆಳವಣಿಗೆ 7.4 ಶೇಕಡಾದಷ್ಟಿದೆ. ಅಮೆರಿಕ, ಚೀನಾಗಳು ಹಿನ್ನಡೆ ಸಾಧಿಸಿವೆ ಎಂದರು.
ಕೋವಿಡ್ ಸಂದರ್ಭದಲ್ಲಿ ಮೋದಿಜಿ ಅವರ ನೇತೃತ್ವದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಿಂದ 80 ಕೋಟಿ ಜನರು ಪ್ರಯೋಜನ ಪಡೆದರು. ಅಲ್ಲದೆ, ಜನರು ಹಸಿವಿನಿಂದ ಸಾಯುವುದು ತಪ್ಪಿತು. ಮೂಲಸೌಕರ್ಯ ಅಭಿವೃದ್ಧಿಗೆ ನಾವು ಗರಿಷ್ಠ ಆದ್ಯತೆ ಕೊಟ್ಟಿದ್ದೇವೆ. ಭಾರತವು ಯೋಜಿತ ರೀತಿಯಲ್ಲಿ ಹಣ ಹೂಡಿಕೆ ಮಾಡಿದೆ. ಕೋವಿಡ್ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ರೈಲುಗಳ ಹಳಿಯಲ್ಲಿ ಮಾರ್ಪಾಡು, ರೈಲ್ವೆ ಹಳಿ ವಿದ್ಯುದೀಕರಣ ಕಾಮಗಾರಿ, ವಿಮಾನನಿಲ್ದಾಣ ಕಾಮಗಾರಿ ಸ್ಥಗಿತವಾಗಲಿಲ್ಲ ಎಂದು ನೆನಪಿಸಿದರು. ದೂರದೃಷ್ಟಿ ಉಳ್ಳ ದೇಶ ನಮ್ಮದು. ದೂರದರ್ಶಿತ್ವದ ನಾಯಕ ಮೋದಿಜಿ ನಮ್ಮವರು ಎಂದು ವಿವರಿಸಿದರು.
ಕೋವಿಡ್‍ಗೆ ಸಂಬಂಧಿಸಿ ಅಮೆರಿಕದಲ್ಲಿ ಶೇ 76, ಯುರೋಪ್‍ನಲ್ಲಿ ಶೇ 67 ರಷ್ಟು ಜನರಿಗೆ ಲಸಿಕೆ ಹಾಕಲಾಗಿದೆ. ಚೀನಾದಲ್ಲಿ ಎಷ್ಟು ಶೇಕಡಾ ಲಸಿಕೆ ಕೊಡಲಾಗಿದೆ ಎಂದು ಗೊತ್ತಿಲ್ಲ. ನಾವು ಮೋದಿಜಿ ಅವರ ನೇತೃತ್ವದಲ್ಲಿ ಎಲ್ಲ ಜನರಿಗೆ ಶೇ 100ರಷ್ಟು ಡಬಲ್ ಡೋಸ್, ಬೂಸ್ಟರ್ ಉಚಿತ ಲಸಿಕೆ ಕೊಟ್ಟಿದ್ದೇವೆ ಎಂದು ತಿಳಿಸಿದರು. ಅಮೆರಿಕದಲ್ಲಿ ಕಾಗದದಲ್ಲಿ ಕೋವಿಡ್ ಸರ್ಟಿಫಿಕೇಟ್ ಕೊಡಲಾಗುತ್ತಿದೆ. ಆದರೆ, ನಾವು ಮೊಬೈಲ್‍ನಲ್ಲಿ ಸರ್ಟಿಫಿಕೇಟ್ ಕೊಡುತ್ತಿದ್ದೇವೆ. ಇದು ಭಾರತ ಎಂದು ನುಡಿದರು.
ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮ ಆಗಲು ಭಾರತವು 28 ವರ್ಷ ಕಾಯಬೇಕಾಯಿತು. ಟಿಬಿ (ಕ್ಷಯ) ರೋಗಕ್ಕೆ ಔಷಧಿ ಸಿಗಲು 30 ವರ್ಷ ಬೇಕಾಯಿತು. ಆದರೆ, ಕೋವಿಡ್‍ಗೆ ಕೇವಲ 9 ತಿಂಗಳಲ್ಲಿ 2 ಲಸಿಕೆ ಸಿಕ್ಕಿತು. ಇದು ಮೋದಿಜಿ ಅವರ ಸಮರ್ಥ ನಾಯಕತ್ವದ ಪರಿಣಾಮ. ನಾವೀಗ 100 ದೇಶಗಳಿಗೆ ಲಸಿಕೆ ನೀಡಿದ್ದೇವೆ. ಭಾರತ ಈಗ ಕೇಳುವ ದೇಶವಾಗಿ ಉಳಿದಿಲ್ಲ; ಅದು ಕೊಡುವ ದೇಶವಾಗಿ ಪರಿವರ್ತನೆ ಹೊಂದಿದೆ ಎಂದು ವಿವರಿಸಿದರು.
ಶಿವಮೊಗ್ಗದಲ್ಲಿ ಶೀಘ್ರವೇ ವಿಮಾನನಿಲ್ದಾಣ ಆರಂಭವಾಗಲಿದೆ ಎಂದು ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಅವರಂಥ ಬಿಜೆಪಿ ನಾಯಕರು ಮಾತ್ರ ಮಾತನಾಡಲು ಸಾಧ್ಯವಿದೆ. ಆದರೆ, ಕಾಂಗ್ರೆಸ್ ನಾಯಕರು ಇಂಥ ಅಭಿವೃದ್ಧಿ ವಿಚಾರಗಳನ್ನು ಮಾತನಾಡುತ್ತಿಲ್ಲ ಎಂದು ಟೀಕಿಸಿದರು.
ಭಾರತೀಯರನ್ನು ಅಫಘಾನಿಸ್ತಾನದಿಂದ, ಉಕ್ರೇನ್‍ನಿಂದ ವಿದ್ಯಾರ್ಥಿಗಳನ್ನು ಕರೆತರಲು ಬಿಜೆಪಿ ಸರಕಾರ ಯಶಸ್ವಿಯಾಗಿದೆ. ಇದು ಜನಪರ ನೀತಿಗೆ ಮತ್ತು ಭಾರತದ ನಾಯಕತ್ವ ಗುಣಕ್ಕೆ ಸಾಕ್ಷಿ ಎಂದ ಅವರು, ಭಾರತ ಹಿಂದೆ 10ನೇ ಅತಿದೊಡ್ಡ ಆರ್ಥಿಕ ಶಕ್ತಿ ಆಗಿತ್ತು. ಈಗ ಅದು 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. ಬ್ರಿಟನ್ ದೇಶವು 2 ಶತಮಾನಗಳ ಕಾಲ ನಮ್ಮನ್ನು ಆಳಿತ್ತು. ಆ ದೇಶವನ್ನು ಭಾರತವು ಹಿಂದಿಕ್ಕಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
ನಾವು ಆಟೋಮೊಬೈಲ್ ಕ್ಷೇತ್ರದಲ್ಲೂ ಜಪಾನನ್ನು ಹಿಂದಿಕ್ಕಿ ಮೂರನೇ ಅತಿ ದೊಡ್ಡ ಉತ್ಪಾದನಾ ರಾಷ್ಟ್ರವಾಗಿದ್ದೇವೆ. 2014 ಮತ್ತು ಅದಕ್ಕಿಂತ ಹಿಂದೆ 92 ಶೇಕಡಾ ಮೊಬೈಲ್‍ಗಳನ್ನು ಚೀನಾ- ವಿದೇಶದಿಂದ ತರಲಾಗುತ್ತಿತ್ತು. ಈಗ ಶೇ 97ರಷ್ಟು ಮೊಬೈಲ್‍ಗಳನ್ನು ಆಂತರಿಕವಾಗಿ ಉತ್ಪಾದಿಸಲಾಗುತ್ತಿದೆ ಎಂದು ತಿಳಿಸಿದರು. ರಾಸಾಯನಿಕ, ಔಷಧಿ, ಉಕ್ಕು ಉತ್ಪಾದನೆಯಲ್ಲೂ ನಾವು ಮಹತ್ವದ ಸಾಧನೆ ಮಾಡಿದ್ದೇವೆ. ಜಗತ್ತಿಗೇ ಔಷಧ ಸರಬರಾಜು ಮಾಡುವ ದೇಶ ನಮ್ಮದಾಗಿದೆ ಎಂದರು.
ಬಿಜೆಪಿ ಪವರ್‍ಫುಲ್ ಆಗುವಂತೆ ನೋಡಿಕೊಳ್ಳಿ
ನಾವು ರಾಜ್ಯದಲ್ಲಿ ಪವರ್ ಕಟ್ ಆಗಲು ಅವಕಾಶ ಕೊಡಲಿಲ್ಲ. ನೀವು ಕೂಡ ಬಿಜೆಪಿಯ ಪವರ್ ಕಟ್ ಆಗದಂತೆ ನೋಡಿಕೊಳ್ಳಿ; ಬಿಜೆಪಿಯನ್ನು ಪವರ್‍ಫುಲ್ ಮಾಡಿ; ಅದು ನಿಮ್ಮ ಜವಾಬ್ದಾರಿ ಎಂದು ಜೆ.ಪಿ.ನಡ್ಡಾ ಅವರು ಮನವಿ ಮಾಡಿದರು. 12 ಕೋಟಿ ಶೌಚಾಲಯ ನಿರ್ಮಾಣದಿಂದ ಮಹಿಳೆಯರು ಮತ್ತು ಕುಟುಂಬದ ಘನತೆ ಹೆಚ್ಚಾಗಿದೆ. ಹಲವು ರೋಗಗಳಿಂದ ಜನರು ಮುಕ್ತಿ ಪಡೆಯುವಂತಾಯಿತು. 2014ರವರೆಗೆ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಇರಲಿಲ್ಲ. ಆ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಗಿದೆ. ಆದರೆ, ಕಾಂಗ್ರೆಸ್‍ನ ಸಿದ್ದರಾಮಯ್ಯರ ಅವಧಿಯಲ್ಲಿ ಪವರ್ ಕಟ್ ಸರ್ವಸಾಮಾನ್ಯವಾಗಿತ್ತು ಎಂದು ಟೀಕಿಸಿದರು. ಈಗ ಹಳ್ಳಿಗಳಿಗೆ 24 ಗಂಟೆ ವಿದ್ಯುತ್ ಸರಬರಾಜಾಗುತ್ತಿದೆ ಎಂದು ಗಮನ ಸೆಳೆದರು.
ಕರ್ನಾಟಕದ ಬಿಜೆಪಿ ಸರಕಾರವು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ದೃಷ್ಟಿಕೋನದಿಂದ ಕೆಲಸ ಮಾಡುತ್ತಿದೆ. ಬಿಜೆಪಿಯನ್ನು ಗೆಲ್ಲಿಸಿ. ನಾವು ಜನಪರ, ಪ್ರಾಮಾಣಿಕ ಆಡಳಿತ ಕೊಡಲು ಬದ್ಧರಿದ್ದೇವೆ ಎಂದು ತಿಳಿಸಿದರು. ಕರ್ನಾಟಕವು ಸ್ಪೆಷಲ್ ಪರ್ಪಸ್ ಹೆವಿ ವೆಹಿಕಲ್ ಉತ್ಪಾದನೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ಆಟಿಕೆಗಳ ಕ್ಷೇತ್ರದಲ್ಲೂ ನಾವು ರಫ್ತಿನ ಸಾಧನೆ ಮಾಡಿದ್ದೇವೆ ಎಂದು ವಿವರಿಸಿದರು. ಬಿಜೆಪಿ ಸರಕಾರಗಳು ಬಡÀವರ, ಜನಪರ, ಮಹಿಳಾ ಮತ್ತು ರೈತಪರÀ ನೀತಿಯನ್ನು ಹೊಂದಿವೆ. ಸರ್ವರ ಒಳಿತಿಗಾಗಿ ವಿವಿಧ ಯೋಜನೆಗಳನ್ನು ನಮ್ಮ ಸರಕಾರಗಳು ಜಾರಿಗೊಳಿಸಿವೆ ಎಂದು ಅವರು ತಿಳಿಸಿದರಲ್ಲದೆ, ಕಿಸಾನ್ ಸಮ್ಮಾನ್, ವಿಮಾ ಯೋಜನೆ, ಆಯುಷ್ಮಾನ್ ಯೋಜನೆ ಸೇರಿ ವಿವಿಧ ಯೋಜನೆಗಳ ವಿವರ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾಧ್ಯಕ್ಷ ಹೆಚ್.ಸಿ. ಕಲ್ಮರುಡಪ್ಪ, ರಾಜ್ಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಹಾಗೂ ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.