ಬೆಂಗಳೂರು: ‘ಇದು ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ನಾವು ಸಾಕಷ್ಟು ರಾಜಕೀಯ ಬೆಳವಣಿಗೆಗಳನ್ನು ಗಮನಿಸಬೇಕಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, ನಮಗೆ ನಮ್ಮ ಸ್ನೇಹಿತರು ಯಾರು ಎಂದು ಗೊತ್ತಿದೆ. ಪ್ರತಿಯೊಬ್ಬರಿಗೂ ಆತ್ಮಗೌರವ ಇದೆ. ಹೀಗಾಗಿ ನಾವು ಪಕ್ಷೇತರ ಅಭ್ಯರ್ಥಿ ನಿಲ್ಲಿಸುವಂತೆ ಜೆಡಿಎಸ್ ಪಕ್ಷಕ್ಕೆ ಮನವಿ ಮಾಡಿದ್ದೆವು. ನಾವು ಕೂಡ ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಮನವಿ ಮಾಡಿದ್ದೆವು ಎಂದಿದ್ದಾರೆ.
ಇಷ್ಟೇ ಅಲ್ಲದೆ ರೆಹಮಾನ್ ಖಾನ್ ಅವರನ್ನು ಕೂಡ ಜೆಡಿಎಸ್ ನಾಯಕರ ಮನೆಗೆ ಕಳುಹಿಸಿ ಬೆಂಬಲಿಸುವಂತೆ ಮನವಿ ಮಾಡಲಾಗಿತ್ತು. ಇಷ್ಟಾದರೂ ಅವರು ನಮ್ಮ ಮನವಿಗೆ ಸ್ಪಂದಿಸಲಿಲ್ಲ. ನಾವು ಈ ಹಿಂದೆ ಹಲವು ಬಾರಿ ಅವರ ಬೆಂಬಲಕ್ಕೆ ನಿಂತಿದ್ದೇವೆ. ಕಳೆದ ಬಾರಿ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲೂ ನಾವು ಅವರ ಅಭ್ಯರ್ಥಿ ವಿರುದ್ಧ ಪ್ರತಿಸ್ಪರ್ಧಿ ಹಾಕಿರಲಿಲ್ಲ. ಆದರೆ ಕುಮಾರಸ್ವಾಮಿ ಅವರು, ಬಿಜೆಪಿ ಯಾವುದೇ ಅಭ್ಯರ್ಥಿ ಹಾಕಲಿಲ್ಲ ಎಂಬ ಕಾರಣಕ್ಕೆ ನಾವು ಹಾಕಲಿಲ್ಲ ಎಂದು ಹೇಳಿದ್ದಾರೆ. ಅವರು ನಮ್ಮ ಸಹಾಯ ಹಾಗೂ ಮೈತ್ರಿ ಸರ್ಕಾರ ರಚನೆ ವೇಳೆ ನಮ್ಮ ಬೇಷರತ್ ಬೆಂಬಲವನ್ನು ಸ್ಮರಿಸಲಿಲ್ಲ. ಅದು ಅವರ ಆಯ್ಕೆ’ ಎಂದಿದ್ದಾರೆ.
ಇನ್ನು ಮುಂದೆ ಕಾಂಗ್ರೆಸ್, ಬಿಜೆಪಿ ಜತೆ ಮೈತ್ರಿ ಅಸಾಧ್ಯ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ‘ ಅವರಿಗೆ ನಮ್ಮ ಬೆಂಬಲದ ಅಗತ್ಯವಿದ್ದರೆ ನಮ್ಮ ಜತೆ ಚರ್ಚೆ ಮಾಡಬೇಕಿತ್ತು. ನಾವು ಮೊದಲು ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಆದರೂ ಅವರು ನಮ್ಮ ಜತೆ ಚರ್ಚೆ ಮಾಡಲಿಲ್ಲ. ಮೈಸೂರು ಪಾಲಿಕೆ ಚುನಾವಣೆ ಸೇರಿದಂತೆ ಈ ಹಿಂದೆ ಏನೆಲ್ಲಾ ನಡೆದಿವೆ ಎಂದು ಎಲ್ಲರೂ ನೋಡಿದ್ದಾರೆ. ವಿನಾಕಾರಣ ನಮ್ಮ ಶಾಸಕಾಂಗ ಪಕ್ಷದ ನಾಯಕರನ್ನು ಟೀಕಿಸುವುದರಿಂದ ಅವರಿಗೆ ಯಾವುದೇ ಪ್ರಯೋಜನವಿಲ್ಲ’ ಎಂದರು.
ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರನ್ನು ಬಲಿಪಶು ಮಾಡುತ್ತಿದ್ದಾರೆ ಎಂಬ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ ಈ ರೀತಿಯ ಆರೋಪ ಸರಿಯಲ್ಲ. ಕುಮಾರಸ್ವಾಮಿ ಅವರು ಸಿ.ಎಂ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೇವೆ ಎಂದು ಹೇಳುತ್ತಾ, ಪರಿಷತ್ ನಲ್ಲಿ ಅಲ್ಪಸಂಖ್ಯಾತ ನಾಯಕನ ಸ್ಥಾನವನ್ನು ಕಳೆದರು. ಇದೆಲ್ಲವೂ ಯಾರು ಅಲ್ಪಸಂಖ್ಯಾತರನ್ನು ಬಲಿಪಶು ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ’ ಎಂದರು.
ಬಿಜೆಪಿಯನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತಡೆಯಲು ಕಾಂಗ್ರೆಸ್ ಸ್ಥಳೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿದೆಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ ಬಿಜೆಪಿಯನ್ನು ತಡೆಯುವ ಸಾಮರ್ಥ್ಯ ನಮಗಿದೆ. ಕರ್ನಾಟಕ ರಾಜ್ಯದ ಜನ ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಅರಿತಿದ್ದು, ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ತಿಳಿದಿದ್ದಾರೆ. ಸರ್ಕಾರದ 40% ಕಮಿಷನ್, ನಿರುದ್ಯೋಗ ಹೆಚ್ಚಳ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವುದನ್ನು ಕಂಡು ಜನ ಬೇಸತ್ತಿದ್ದು, ಅವರೇ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುತ್ತಾರೆ’ ಎಂದರು.
ಮುಂದಿನ ವರ್ಷದ ಚುನಾವಣೆ ಮೇಲೆ ಈ ರಾಜ್ಯಸಭೆ ಚುನಾವಣೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಪ್ರಶ್ನೆಗೆ, ‘ ಈ ಚುನಾವಣೆ ಹೆಚ್ಚಿನ ಪ್ರಾಮುಖ್ಯತೆ ಹೊಂದಿಲ್ಲ. ಇದು ಯಾವ ಪರಿಣಾಮವನ್ನೂ ಬೀರುವುದಿಲ್ಲ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ರಾಷ್ಟ್ರ ರಾಜಕಾರಣಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ಭವಿಷ್ಯದ ಸಂದೇಶ ರವಾನೆ ಮಾಡಲಿದೆ’ ಎಂದರು.





















































