ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ದೆಹಲಿಯಿಂದ ಬಂದ ಮೇಲೆ ವಿಧಾನ ಪರಿಷತ್ ಚುನಾವಣೆಯ ಮೈತ್ರಿ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಾಸ್ವಾಮಿ ಹೇಳಿದ್ದಾರೆ
ಮೇಲ್ಮನೆ ಚುನಾವಣೆ ಹಿನ್ನೆಲೆಯಲ್ಲಿ ಬಿಡದಿಯ ತಮ್ಮ ತೋಟದಲ್ಲಿ ರಾಮನಗರ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳ ಮತದಾರರ ಜತೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಜೆಡಿಎಸ್ ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಯಡಿಯೂರಪ್ಪನವರು ಬಹಿರಂಗವಾಗಿಯೇ ಮನವಿ ಮಾಡಿದ್ದಾರೆ. ಆದರೆ, ಕಾಂಗ್ರೆಸ್ʼನವರು ನಮಗೆ ಜೆಡಿಎಸ್ ಪಕ್ಷದ ಮತಗಳ ಅಗತ್ಯವಿಲ್ಲ. ಅವರ ಜತೆ ಹೊಂದಾಣಿಕೆ ಪ್ರಶ್ನೆ ಇಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಬೇಡ ಎಂದವರ ಮನೆ ಬಾಗಿಲಿಗೆ ಹೋಗಲಿಕ್ಕೆ ಆಗುತ್ತದೆಯೇ? ಹೀಗಾಗಿ ಯಡಿಯೂರಪ್ಪ ಅವರ ಮನವಿ ಬಗ್ಗೆ ಏನು ತೀರ್ಮಾನ ಕೈಗೊಳ್ಳಬೇಕೋ ಎಂಬುದನ್ನು ಶೀಘ್ರವೇ ನಿರ್ಧಾರ ಮಾಡುತ್ತೇವೆ ಎಂದು ಅವರು ಹೇಳಿದರು.
ಮೋದಿ ಅವರ ಜತೆ ಗೌಡರು ಚುನಾವಣೆ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಿರಬಹುದಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು; ಮೊದಲಿನಿಂದಲೂ ಪ್ರಧಾನಮಂತ್ರಿಗಳು ಮತ್ತು ದೇವೇಗೌಡರ ನಡುವೆ ಉತ್ತಮ ಬಾಂಧವ್ಯವಿದೆ. ಗೌಡರ ಬಗ್ಗೆ ಮೋದಿ ಅವರಿಗೆ ವಿಶೇಷ ಗೌರವವಿದೆ. ಅವರಿಬ್ಬರೂ ಭೇಟಿಯಾಗುವುದು ಹೊಸದೇನಲ್ಲ. ನಾನು ಸಿಎಂ ಆಗಿದ್ದಾಗ ಭೇಟಿಯಾಗಿದ್ದ ಸಂದರ್ಭದಿಂದಲೂ ನನಗೆ ಗೊತ್ತಿದೆ. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ ಹಾಸನಕ್ಕೆ ಐಐಟಿ ತರುವ ವಿಚಾರದ ಬಗ್ಗೆ ಮೋದಿ ಅವರ ಜತೆ ಚರ್ಚೆ ನಡೆಸಲು ಹೋಗಿದ್ದಾರೆಂಬ ಮಾಹಿತಿ ಗಮನಿಸಿದ್ದೇನೆ. ಜತೆಗೆ, ವಿಧಾನ ಪರಿಷತ್ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಿರಬಹುದು. ಗೌಡರು ದೆಹಲಿಯಿಂದ ವಾಪಸ್ ಬಂದ ಮೇಲೆ ಅವರೊಂದಿಗೆ ಚರ್ಚೆ ನಡೆಸಿ ಮಾಹಿತಿ ನೀಡುವೆ ಎಂದರು.
ಬಳ್ಳಾರಿ ಲೋಕಾಯುಕ್ತದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯ ಬಗ್ಗೆ ಕಾಂಗ್ರೆಸ್ ವತಿಯಿಂದ ದೂರು ನೀಡಲಾಗಿದೆ. ಯಾತಕ್ಕಾಗಿ ದೂರು ನೀಡಲಾಗಿದೆಯೋ ನನಗೆ ಗೊತ್ತಿಲ್ಲ. ನಾನೆಂದೂ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಚುನಾವಣೆ ನಡೆಸಿದವನಲ್ಲ. ನಮ್ಮ ಕಾರ್ಯಕರ್ತರ ವಿಶ್ವಾಸದಲ್ಲಿ ಮಾತ್ರ ಕೆಲಸ ಮಾಡಿದವನು ನಾನು. ಹೀಗಾಗಿ ವೈಯಕ್ತಿಕ ದ್ವೇಷದ ಮೇಲೆ ಆ ಅಧಿಕಾರಿ ವಿರುದ್ಧ ದೂರು ಕೊಟ್ಟಿರಬಹುದು. ಸತ್ಯಾಂಶ ಏನೆಂಬುದು ತನುಖೆಯಿಂದ ಹೊರಬರಲಿ. ನಮ್ಮ ಅಭ್ಯರ್ಥಿಗೆ ನಮ್ಮ ಕಾರ್ಯಕರ್ತರು ಮತ ಹಾಕಿಸಲಿಕ್ಕೆ ಸಾಧ್ಯವೋ ಅಥವಾ ಅಧಿಕಾರಿ ಹಾಕಿಸಲಿಕ್ಕೆ ಸಾಧ್ಯವೋ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.
ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸಂಚು ಪ್ರಕರಣ; ಸತ್ಯ ಹೊರಬರಲಿ
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ನನಗೆ ವಾಸ್ತವ ಅಂಶಗಳೇನು ಎನ್ನುವುದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ ಮಾಹಿತಿಯನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಸರಿಯಾದ ತನಿಖೆಯ ಮೂಲಕ ಸತ್ಯ ಆಚೆಗೆ ಬರಲಿ. ಒಂದು ವೇಳೆ ಹತ್ಯೆ ಸಂಚು ನಿಜವೇ ಆಗಿದ್ದರೆ ಕಠಿಣವಾಗಿ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.
ರಾಜಕಾರಣವೇ ಬೇರೆ. ಆದರೆ ಅದರ ನೆಪದಲ್ಲಿ ಭೂ ವ್ಯವಹಾರವೋ ಅಥವಾ ಇನ್ನವುದೋ ವ್ಯವಹಾರಗಳನ್ನು ನಡೆಸಬೇಕಾದರೆ ಹತ್ಯೆ ಮಾಡುವಂಥ ಹಂತಕ್ಕೆ ಯಾರೂ ತೆಗೆದುಕೊಂಡು ಹೋಗಬಾರದು. ಸರಕಾರ ನಿರ್ಲಕ್ಷ್ಯ ಮಾಡಿದೇ ದಕ್ಷ ಅಧಿಕಾರಿಗಳನ್ನು ಬಿಟ್ಟು ತನಿಖೆ ಮಾಡಿಸಿ ಸತ್ಯವನ್ನು ಹೊರಗೆಳೆದು ಜನರ ಮುಂದೆ ಇಡಬೇಕು ಎಂದು ಅವರು ಒತ್ತಾಯಿಸಿದರು.
ರಾಮನಗರ ನನ್ನ ಕರ್ಮಭೂಮಿ
ರಾಜ್ಯ ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಿಷ್ಟು;
“ಪಕ್ಷದ ಬಯಸಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಕಾರ್ಯಕರ್ತರ ಒಲವು, ಪಕ್ಷದ ಆದೇಶ ಬಂದರೆ ಸ್ಪರ್ಧಿಸಲು ತಯಾರಿದ್ದೇನೆ ಎಂದು ಹೇಳಿದ್ದಾರೆ. ಅದು ಇನ್ನೂ ಎರಡು ವರ್ಷದ ಮಾತು.”
ನಿಖಿಲ್ ಅವರು ರಾಮನಗರ ಅಥವಾ ಮಂಡ್ಯ ಇವೆರಡರಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವುದಾದರೆ; ರಾಮನಗರ ನಮ್ಮ ಕರ್ಮಭೂಮಿ. ನಮ್ಮ ಹೃದಯದಲ್ಲಿರುವ ನೆಲೆ. ಈ ಭೂಮಿ ಮೇಲೆ ಇರುವವರೆಗೂ ಇಲ್ಲೇ ಇರುತ್ತೇವೆಯಲ್ಲದೇ, ಭೂಮಿ ಮೇಲೆ ಮಣ್ಣಾದರೂ ಈ ಮಣ್ಣಲ್ಲೇ ಮಣ್ಣಾಗುವೆ. ನಮ್ಮ ಮತ್ತು ರಾಮನಗರದ ನಡುವೆ ವಿಶೇಷ ಬಾಂಧವ್ಯವಿದೆ. ಅದನ್ನು ಅಳಿಸಲು ಯಾರಿದಂಲೂ ಸಾಧ್ಯವಿಲ್ಲ. ಉಸಿರಿರುವ ತನಕವಷ್ಟೇ ಅಲ್ಲ ಉಸಿರು ನಿಂತ ಮೇಲೆಯೂ ರಾಮನಗರವೇ ನಮ್ಮ ಕರ್ಮಭೂಮಿ ಆಗಿರುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.