ಚೆನ್ನೈ: ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಸರ್ಕಾರ ಕರ್ನಾಟಕದ ವಿರುದ್ದ ರಣತಂತ್ರ ರೂಪಿಸುತ್ತಿದೆ. ಕರಗನಾಟಕದ ಯೋಜನೆಯನ್ನು ಶತಾಯಗತಾಯ ತಡೆಯಬೇಕೆಂಬ ಉದ್ದೇಶದಿಂದ ತಮಿಳುನಾಡು ಇದೀಗ ಮತ್ತೊಂದು ರೀತಿಯಲ್ಲಿ ಕಾನೂನು ಸಮರಕ್ಕೆ ಸಜ್ಜಾಗುತ್ತಿದೆ. ಈ ಸಂಬಂಧ ಚರ್ಚಿಸಲು ಸಿಎಂ ಸ್ಟಾಲಿನ್ ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ.
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಡ್ಯಾಂ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ಯೋಜನೆ ರೂಪಿಸಿದ್ದು, ಇದಕ್ಕೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಕೇಂದ್ರದ ಮೇಲೆ ಒತ್ತಡ ಹೇರುವ ಉದ್ದಶದಿಂದ ಮೇಕೆದಾಟು ಅಣೆಕಟ್ಟೆ ವಿಚಾರ ಮುಂದಿಟ್ಟು ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಸೋಮವಾರ ಸರ್ವ ಪಕ್ಷ ಸಭೆ ಕರೆದಿದ್ದಾರೆ ಎನ್ನಲಾಗಿದೆ.
ಈ ನಡುವೆ, ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸ್ಟಾಲಿನ್, ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆಗೆ ಅನುಮೋದನೆ ನೀಡುವುದು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿದೆ. ಒಂದು ವೇಳೆ ಮೇಕೆದಾಟು ಯೋಜನೆ ಜಾರಿಗೆ ಬಂದರೆ ತಮಿಳುನಾಡಿನ ರೈತರಿಗೆ ಸಂಕಷ್ಟ ಎದುರಾಗಲಿದೆ ಎಂದಿದ್ದಾರೆ.