ರಾಮನಗರ: ಮೇಕೆದಾಟು ಪಾದಯಾತ್ರೆ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆಯಷ್ಟೇ ಈ ಪಾದಯಾತ್ರೆಯನ್ನು ಮುಂದಿನ ದಿನಗಳಲ್ಲಿ ಮುಂದುವರಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ರಾಮನಗರದಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ನ್ಯಾಯಾಲಯದ ಅಭಿಪ್ರಾಯಕ್ಕೆ ಗೌರವ ಕೊಟ್ಟು ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದರು.
ಈ ಹೋರಾಟ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ, ಜನರಿಗೆ ಕುಡಿಯುವ ನೀರು ನೀಡುವ ಬದ್ಧತೆಯನ್ನು ಪಕ್ಷ ಕಾಯ್ದುಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇದೇ ರಾಮನಗರದಿಂದ ಪಾದಯಾತ್ರೆ ಮುಂದುವರಿಸಲಾಗುತ್ತದೆ ಎಂದವರು ತಿಳಿಸಿದರು.
ಬುಧವಾರ ರಾತ್ರಿ ಅಧಿಕಾರಿಗಳು ಬಂದು ಜಿಲ್ಲಾಧಿಕಾರಿಗಳ ಪತ್ರ ಎಂದು ಕೊಡಲು ಬಂದರು. ಜಿಲ್ಲಾಧಿಕಾರಿಗೆ ಕೊವಿಡ್ ಬಂದಿದೆಯಲ್ಲ, ಈಗ ಯಾಕೆ ಬಂದಿದ್ದೀರಿ ಎಂದು ಹೇಳಿ ಕಳುಹಿಸಿದೆ. ನಮ್ಮ ಮಾಜಿ ಮೆಯರ್ ಪಿ.ಆರ್ ರಮೇಶ್ ಅವರು ಬೆಳಗ್ಗೆ ಕರೆ ಮಾಡಿ ಬಸವನಗುಡಿಯ ಮೈದಾನದಲ್ಲಿ ಕಾರ್ಯಕ್ರಮಕ್ಕೆ ನೀಡಲಾಗಿದ್ದ ಅನುಮತಿಯನ್ನು ಬಿಬಿಎಂಪಿ ಹಿಂಪಡೆದಿದೆ ಎಂದರು.
ನಂತರ ಸರ್ಕಾರದ ನೊಟೀಸ್ ನೋಡಿದೆ. ಅದರಲ್ಲಿ ಪಾದಯಾತ್ರೆ ರದ್ದು ಮಾಡಬೇಕು ಎಂದು ಹೇಳಿದೆ. ಇನ್ನು ನಮ್ಮ ಜಿಲ್ಲಾಧ್ಯಕ್ಷರಿಗೆ ನೀಡಿದ ಅನುಮತಿಯಲ್ಲಿ ಜನರಿಗೆ ತೊಂದರೆಯಾಗದಂತೆ ಪಾದಯಾತ್ರೆ ಮಾಡಿ ಎಂದು ಹೇಳಲಾಗಿತ್ತು. ಪೊಲೀಸರಿಗೆ ಬರೆದ ಪತ್ರದಲ್ಲಿ ವ್ಯವಸ್ಥಿತವಾಗಿ ಅವಕಾಶ ಮಾಡಿಕೊಡಿ ಎಂದೂ ಹೇಳಿತ್ತು. ಆ ಮೂಲಕ ಈ ಪಾದಯಾತ್ರೆ ನಡೆಯಲಿ ಎಂಬ ಆಸೆ ಸರ್ಕಾರಕ್ಕೂ ಇದೆ. ಆದರೂ ನಿಮ್ಮ ಮುಂದೆ ಬೇರೆಯದೇ ಹೇಳುತ್ತಿದ್ದಾರೆ. ಈಗ ಆ ವಿಚಾರ ಬಿಡಿ ಎಂದ ಡಿಕೆಶಿ, ಈಗ ನಮ್ಮ ಶಾಸಕಾಂಗ ಪಕ್ಷದ ನಾಯಕರು, ಮುಖಂಡರ ಒಟ್ಟಾರೆ ಅಭಿಪ್ರಾಯ, ಜನರ ಭಾವನೆ ಕುರಿತು ನಮ್ಮ ಶಾಸಕರ ಜತೆ ಚರ್ಚೆ ಮಾಡಿದೆವು. ನ್ಯಾಯಾಲಯ ನಮಗೆ ಪಾದಯಾತ್ರೆ ಮಾಡಬೇಡಿ ಎಂದು ಹೇಳದಿದ್ದರೂ ನ್ಯಾಯಾಲಯದ ಅಭಿಪ್ರಾಯಕ್ಕೆ ಗೌರವದಿಂದ ಮನ್ನಣೆ ನೀಡಿ, ನಮ್ಮ ದೇವರುಗಳಾದ ಜನರ ಭಾವನೆ ನೋಡಿ ಈ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದೇವೆ ಎಂದರು.
ಹೆಚ್ಚಿನ ಜನ ಭಾಗವಹಿಸಲು ಅವಕಾಶವಾಗದಿದ್ದರೂ ನಾವಿಬ್ಬರೇ ನಡೆಯಬೇಕು ಎಂದು ಮೊದಲು ಅಂದುಕೊಂಡಿದ್ದೆವು. ನಾವು ಹೋಗುವಾಗ ಜನ ಸೇರುತ್ತಿದ್ದಾರೆ. ಇದರಿಂದ ಮತ್ತೆ ಗುಂಪು ಸೃಷ್ಟಿಯಾಗುತ್ತದೆ ಎಂದ ಅವರು, ಕಾಂಗ್ರೆಸ್ ಗೆ ಹೋರಾಟದ ಬದ್ಧತೆ ಇದೆ. ಈ ನೋಟೀಸ್, ಕೇಸ್, ಜೈಲಿಗೆ ನಾವು ಹೆದರುವುದಿಲ್ಲ. ಜನರಿಗೆ ಒಳ್ಳೆಯದಾಗಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದರು.
ಬಿಜೆಪಿಯವರು ತಮ್ಮ ತಪ್ಪನ್ನು ನಮ್ಮ ಮೇಲೆ ಹಾಕಲು ಪಿತೂರಿ ಮಾಡುತ್ತಿದ್ದಾರೆ. ಈ ಯಾತ್ರೆಯನ್ನು ನಾವು ನಿಲ್ಲಿಸುತ್ತಿಲ್ಲ, ಕೇವಲ ಮುಂದೂಡುತ್ತಿದ್ದೇವೆ. ಮುಂದೆ ಇದೇ ರಾಮನಗರದಿಂದಲೇ ಆರಂಭಿಸುತ್ತೇವೆ. ಇದು ತಾತ್ಕಾಲಿಕ ವಿರಾಮ ಅಷ್ಟೇ ಎಂದ ಅವರು, ಸರ್ಕಾರಕ್ಕೆ ನ್ಯಾಯ, ಕಾನೂನು ಎಲ್ಲರಿಗೂ ಒಂದೇ ಎಂಬ ಬದ್ಧತೆ ಇದ್ದರೆ, ಕೋವಿಡ್ ಆರಂಭವಾದಾಗಿನಿಂದ ನಿಮ್ಮ ಶಾಸಕರು, ಸಚಿವರು, ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದ್ದರೂ, ಧಾರ್ಮಿಕವಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಒಬ್ಬರಿಗೆ ಒಂದು ಮತ್ತೊಬ್ಬರಿಗೆ ಇನ್ನೊಂದು ಕಾನೂನು, ನ್ಯಾಯ ಅನ್ವಯ ಆಗುತ್ತದೆಯೇ? ಎಂದು ಪ್ರಶ್ನಸಿದರಲ್ಲದೆ, ಈಗಲಾದರೂ ಕಾನೂನು ಉಲ್ಲಂಘನೆ ಮಾಡಿರುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಿ, ನಿಮ್ಮ ಧೈರ್ಯ ಪ್ರದರ್ಶಿಸಿ ಎಂದರು.
ಕೋವಿಡ್ ಗಂಭೀರ ಸ್ಥಿತಿ ತಲುಪಿದಾಗ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಸರ್ಕಾರಕ್ಕೆ ಸಹಕರಿಸಿದೆ. ಅವರಿಗಿಂತ ಹೆಚ್ಚಾಗಿ ಜನರ ಸೇವೆ ಮಾಡಿದೆ. ತರಕಾರಿ ಖರೀದಿ ಮಾಡಿ, ಅದನ್ನು ಜನರಿಗೆ ಉಚಿತವಾಗಿ ಹಂಚಿದ್ದೇವೆ. ಔಷಧಿ, ಹಣ್ಣು, ಆಹಾರ, ದಿನಸಿ, ಆಕ್ಸಿಜನ್ ಕೊಟ್ಟಿದ್ದೇವೆ. ಅಲ್ಪಸಂಖ್ಯಾತರು ಅನಾಥ ಶವಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಎಲ್ಲ ಧರ್ಮಗಳನ್ನು ಒಟ್ಟಾಗಿ ಕರೆದುಕೊಂಡು ಹೋಗುವುದು ನಮ್ಮ ಧ್ಯೇಯ. ಈ ಹೋರಾಟದಲ್ಲಿ ಮಹಿಳೆಯರು, ಮಕ್ಕಳು, ಎಲ್ಲ ವರ್ಗದ ಜನ ಕೊಟ್ಟಿರುವ ಪ್ರೀತಿ ಬೆಂಬಲ ಅಪಾರ. ಅವರಿಗೆ ಶುದ್ಧ ಕುಡಿಯುವ ನೀರು ನೀಡುವುದೇ ನಮ್ಮ ಗುರಿ ಎಂದರು.
ಈ ಹಿಂದೆ ಕಾವೇರಿ ನದಿ ನೀರಿಗಾಗಿ ತಮಿಳುನಾಡು ವಿರುದ್ಧ ಹೋರಾಡುತ್ತಿದ್ದೆವು. ಆದರೆ ಈಗ ನಮ್ಮದೇ ರಾಜ್ಯದ ಎರಡು ಪಕ್ಷಗಳ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಬಂದಿದೆ. ಅವರಿಂದ ಜನರ ರಕ್ಷಣೆ ಮಾಡಬೇಕಾಗಿದೆ. ಜನರಿಗೆ ಕಾವೇರಿ ಕುಡಿಯುವ ನೀರು ನೀಡುವುದು ನಮ್ಮ ಗುರಿ. ಅದಕ್ಕೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.