ನವದೆಹಲಿ,ಸೆ.26: ದಿನಸಿಯಂಗಡಿ ನಡೆಸಿಕೊಂಡು ಹೋಗುವ ನಡುವೆ ಬಿಡುವು ಮಾಡಿಕೊಂಡು ಮೆಟ್ರೋ ಸೇತುವೆಯ ಬಳಿಯಿರುವ 300ಕ್ಕೂ ಹೆಚ್ಚು ಬಡ ಮಕ್ಕಳಿಗೆ ತನ್ನ ಕೈಲಾದ ಮಟ್ಟಿಗೆ ಶಿಕ್ಷಣ ಕೊಡೋದು..13 ವರ್ಷಗಳಿಂದ ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆಗಳ ನೆರವಿಲ್ಲದೆ ಎಲ್ಲರಿಗೆ ಮಾದರಿಯಾಗೋದು ಸುಲಭದ ವಿಚಾರವಲ್ಲ..ಇಂತಹ ವಿಭಿನ್ನ ಸಾಧನೆ ಮಾಡಿರುವವರು ಉತ್ತರ ಪ್ರದೇಶ ಮೂಲದ ರಾಜೇಶ್ ಎಂಬವರು..
ದೆಹಲಿಯಲ್ಲಿ ದಿನಸಿ ಅಂಗಡಿಯಿಟ್ಟು ವ್ಯಾಪಾರ ನಡೆಸುತ್ತಿರುವ ರಾಜೇಶ್, ಯಮುನಾ ನದಿ ತಟದಲ್ಲಿರುವ ಮೆಟ್ರೋ ಬಳಿ ಜೋಪಡಿಯಲ್ಲಿ ಜೀವನ ಕಂಡುಕೊಂಡಿರುವ ಬಡ ಕುಟುಂಬದ ಮಕ್ಕಳಿಗೆ ಮೆಟ್ರೋ ಸೇತುವೆಯಡಿಯ ಓಪನ್ ಹೌಸ್ ಸ್ಕೂಲ್ ಮಾಡಿ, ಬೆಳಗ್ಗೆ ಹಾಗೂ ಮಧ್ಯಾಹ್ನ ಸೇರಿ 2 ಪಾಳಯದಲ್ಲಿ ವಿದ್ಯಾದಾನ ಮಾಡುತ್ತಿದ್ದಾರೆ.. ಬೆಳಗ್ಗೆ 9 ರಿಂದ 11 ಮತ್ತು ಮಧ್ಯಾಹ್ನ 2 ರಿಂದ 4.30 ರವರೆಗೆ ಎರಡು ಪಾಳಿಯಲ್ಲಿ ಮಕ್ಕಳಿಗೆ ರಾಜೇಶ್ ಅವರು ಪಾಠ ಹೇಳಿಕೊಡುತ್ತಾರೆ. ಇವರ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಅಕ್ಕ-ಪಕ್ಕದಲ್ಲಿ ವಾಸವಾಗಿರೋ ಏಳು ಮಂದಿ ಶಿಕ್ಷಕರು ತಮ್ಮ ಬಿಡುವಿನ ವೇಳೆಯಲ್ಲಿ ಈ ಶಾಲೆಗೆ ಬಂದು ಪಾಠ ಹೇಳಿಕೊಡುತ್ತಿದ್ದಾರೆ.
ಅಲ್ಲದೆ ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹೆಚ್ಚಿಗೆ ಓದುವ ಆಸೆ ಇದ್ದರೆ, ಅವರನ್ನು ರಾಜೇಶ್ ಅವರು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಅವರು ಹೆಚ್ಚಿನ ಶಿಕ್ಷಣ ಪಡೆಯಲು ಸಹಾಯ ಮಾಡುತ್ತಾರೆ. ಇಂತಹ ಮಹತ್ಕಾರ್ಯವನ್ನು ಅವರು 2006ರಿಂದ ನಡೆಸುತ್ತಾ ಬಂದಿದ್ದು, ನೆರವು ನೀಡಲು ಬರುವ ಸಾರ್ವಜನಿಕರು ಹಾಗೂ ಎನ್ ಜಿಓಗಳಿಗೆ ಹಣಕ್ಕಿಂತ ಆಹಾರ, ಪಠ್ಯ ಪುಸ್ತಕಗಳನ್ನು ನೀಡಲು ಸಹಕರಿಸಿ ಎಂಬುದಾಗಿಯೂ ಕೇಳಕೊಂಡಿದ್ದಾರಂತೆ ರಾಜೇಶ್.
ಒಟ್ಟಿಲ್ಲಿ ವಿದ್ಯಾದಾನವನ್ನೂ ಬ್ಯುಸಿನೆಸ್ ಮಾಡಿಕೊಂಡಿರುವ ಇಂದಿನ ಯುಗದಲ್ಲಿ ನಿಷ್ಠೆಯಿಂದ, ಯಾವುದೇ ಫಲಾಪೇಕ್ಷೆಯಿಲ್ಲದೆ ಇಂತಹ ಉತ್ತಮ ಕೆಲಸವನ್ನು ಮಾಡುವ ಮೂಲಕ ಸಮಾಜಸೇವೆ ಮಾಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.