ಬೆಳಗಾವಿ: ಎಚ್‍ಐವಿ ಸೋಂಕಿತರಿಗೆ ಎಆರ್ ಟಿ ಚಿಕಿತ್ಸೆ ಜೊತೆಗೆ ನೈತಿಕ ಸ್ಪೂರ್ತಿ ತುಂಬುವ ಸಾಮಾಜಿಕ ಚಿಕಿತ್ಸೆಯನ್ನೂ ನೀಡಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಜೆ.ಎನ್.ಎಂ.ಸಿಯಲ್ಲಿ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕೋವಿಡ್ ಸೋಂಕು ಕಂಡುಬಂದ ಆರಂಭದಲ್ಲಿ ರೋಗಿಗಳ ಬಗ್ಗೆ ಕೀಳು ಭಾವನೆ ಇತ್ತು. ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿತ್ತು. ಸರ್ಕಾರದ ಕ್ರಮ ಹಾಗೂ ಜಾಗೃತಿಯಿಂದ ಅದು ದೂರವಾಯಿತು. ಆದರೆ ಎಚ್‍ಐವಿ ಸೋಂಕು ಪತ್ತೆಯಾಗಿ 30-35 ವರ್ಷ ಕಳೆದರೂ ರೋಗಿಗಳ ಬಗ್ಗೆ ಸಮಾಜದಲ್ಲಿ ಕೀಳು ಭಾವನೆ ಇನ್ನೂ ಇದೆ. ಆದ್ದರಿಂದ ಏಡ್ಸ್ ರೋಗಿಗಳಿಗೆ ನೈತಿಕ ಸ್ಪೂರ್ತಿ ನೀಡುವ ಕೆಲಸವಾಗಬೇಕಿದೆ. ಆರೋಗ್ಯ ಇಲಾಖೆಯಿಂದ ಎಆರ್ ಟಿ ಚಿಕಿತ್ಸೆ ನೀಡಿ ರೋಗಿಗೆ ದೀರ್ಘಕಾಲ ಬದುಕುವ ಸ್ಪೂರ್ತಿ ತುಂಬಲಾಗುತ್ತಿದೆ. ಇದೇ ರೀತಿ ನೈತಿಕ ಸ್ಪೂರ್ತಿ ತುಂಬುವುದು ಕೂಡ ಮುಖ್ಯ. ಇದು ಸಮಾಜದಿಂದ ನೀಡಬೇಕಾದ ಚಿಕಿತ್ಸೆ ಎಂದರು.
ಎಚ್‍ಐವಿ ಆರಂಭದಲ್ಲಿ ಕಂಡುಬಂದಾಗ ಅನೇಕ ಅಧ್ಯಯನಗಳು ನಡೆದವು. ಇದು ರೋಗ ನಿರೋಧಕ ಶಕ್ತಿ ಕಡಿಮೆ ಮಾಡಿ, ಶರೀರವನ್ನು ಹಾಳುಗೆಡವುತ್ತದೆ. ಜಗತ್ತಿನಲ್ಲಿ ಈವರೆಗೆ ಮೂರೂವರೆ ಕೋಟಿ ಜನರು ಏಡ್ಸ್ ನಿಂದ ಸಾವಿಗೀಡಾಗಿದ್ದಾರೆ. ಯಾವುದೇ ರೋಗಕ್ಕೆ ವ್ಯಕ್ತಿ ತುತ್ತಾದಾಗ, ಆ ವ್ಯಕ್ತಿಯ ವಿರುದ್ಧ ಹೋರಾಡಬಾರದು. ಬದಲಾಗಿ ಆ ರೋಗದ ವಿರುದ್ಧ ಹೋರಾಟ ನಡೆಸಬೇಕು ಎಂದರು.
ರಾಜ್ಯದಲ್ಲಿ ಒಂದೂಮುಕ್ಕಾಲು ಲಕ್ಷ ಏಡ್ಸ್ ರೋಗಿಗಳಿದ್ದು, ಶೇ.68-70 ರಷ್ಟು ಮಂದಿ ಎಆರ್ ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೂ ಚಿಕಿತ್ಸೆ ಆರಂಭಿಸಬೇಕಿದೆ. ಯಾರೇ ಆದರೂ ಆತಂಕ ದೂರ ಮಾಡಿಕೊಂಡು ಚಿಕಿತ್ಸೆ ಪಡೆಯಬೇಕಿದೆ. ಲೈಂಗಿಕ ಕಾರ್ಯಕರ್ತರಿಗೆ ಸೋಂಕು ಹರಡದಂತೆ ಮಾಡಲು ವಿಶೇಷ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ಯುವ ಸಮೂಹ ಕೂಡ ಈ ಸೋಂಕಿಗೆ ತುತ್ತಾಗದಿರಲು ಜಾಗೃತಿ ಮೂಡಿಸಲಾಗುತ್ತಿದೆ. 2030ರ ವೇಳೆಗೆ ಏಡ್ಸ್ ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ ಇದೆ. ಸಂಘಟಿತ ಹೋರಾಟದಿಂದ ಮಾತ್ರ ಇದು ಸಾಧ್ಯ ಎಂದರು.
ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಪ್ರಯತ್ನ ನಡೆದಿದೆ. ಮಾನವ ಸಂಪನ್ಮೂಲ ಬಲವರ್ಧನೆ, ವೇತನ, ಭತ್ಯೆ ನೀಡುವುದು, ಮೂಲಸೌಕರ್ಯ ಅಭಿವೃದ್ಧಿ ಮೊದಲಾದ ಕ್ರಮಗಳಿಂದ ಆರೋಗ್ಯ ವಲಯವನ್ನು ಬಲಪಡಿಸಿ ಆರೋಗ್ಯ ಕರ್ನಾಟಕ ನಿರ್ಮಿಸಲಾಗುತ್ತಿದೆ ಎಂದರು.
6 ತಿಂಗಳಲ್ಲಿ ಕಾರ್ಡ್:
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ, ಒಂದೂವರೆ ಕೋಟಿ ಜನರಿಗೆ ಕಾರ್ಡ್ ನೀಡಲಾಗಿದೆ. ಇನ್ನೂ ಮೂರೂವರೆ ಕೋಟಿ ಜನರಿಗೆ ಇನ್ನು ಆರು ತಿಂಗಳಲ್ಲಿ ಕಾರ್ಡ್ ನೀಡುವ ಗುರಿ ಇರಿಸಿಕೊಳ್ಳಲಾಗಿದೆ. ಏಳೇ ತಿಂಗಳಲ್ಲಿ 8 ಕೋಟಿ ಜನರಿಗೆ ಕೋವಿಡ್ ಲಸಿಕೆಯನ್ನು ವೇಗವಾಗಿ ನೀಡಿರುವುದು ಆರೋಗ್ಯ ಸಿಬ್ಬಂದಿಯ ಸಾಧನೆ. ಇದೇ ರೀತಿ ಆಂದೋಲನದಂತೆ ಆಯುಷ್ಮಾನ್ ಕಾರ್ಡ್ ನೀಡುವ ಕೆಲಸವಾಗಬೇಕು ಎಂದರು.