ಬೆಂಗಳೂರು: ಎಡೆಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಇಡೀ ರಾಜ್ಯವೇ ನಡುಗಡ್ಡೆ ಆಗಿದ್ದರೂ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ. ನೆರೆ, ಮಳೆ ನಿರ್ವಹಣೆಯಲ್ಲಿ ಅಧಿಕಾರಿಗಳು ಮತ್ತು ಸರಕಾರದ ನಡುವೆ ಹೊಂದಾಣಿಕೆ, ಸಮನ್ವಯತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನೆರೆಯಿಂದ ರೈತರು ಬೀದಿಗೆ ಬಿದ್ದಿದ್ದಾರೆ. ಬೆಳೆದಿದ್ದ ಫಸಲು ಕೈಗೆ ಬಾರದೇ ಅನ್ನದಾತ ದುಃಖದಲ್ಲಿ ಇದ್ದಾನೆ. ಆದರೆ ಸಚಿವರು, ಶಾಸಕರು ಶಂಖ ಊದಿಕೊಂಡು ತಿರುಗುತ್ತಿದ್ದರೆ, ಅಧಿಕಾರಿಗಳು ಮಾತ್ರ ತಮ್ಮ ಪಾಡಿಗೆ ಅವರಿದ್ದಾರೆ ಎಂದರು.
ಮಳೆಯಿಂದಾಗಿ ರೈತರಿಗೆ, ಗ್ರಾಹಕರಿಗೆ ನಿರಂತರ ಸಮಸ್ಯೆ ಆಗುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ನೆರೆಯಿಂದ ನಡುಗಡ್ಡೆಗಳಂತೆ ಆಗಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಜೆಪಿ ನಾಯಕರು ಶಂಖ ಊದಲು ಹೋಗಿದ್ದಾರೆ. ಮುಖ್ಯಮಂತ್ರಿಗಳು ಕೂಡ ಹೋಗಿದ್ದಾರೋ ಏನೋ ಗೊತ್ತಿಲ್ಲ. ಆದರೆ ಈ ಎರಡೂ ಜಿಲ್ಲೆಗಳಲ್ಲಿ ಮಳೆ ಜಾಸ್ತಿ ಆಗಿದೆ. ನೀರು ಮನೆಗಳು ಮತ್ತು ತೋಟಗಳಿಗೆ ನುಗ್ಗಿದೆ. ಬೆಳೆದಿದ್ದ ಬೆಳೆ ನೆಲದ ಮೇಲೆ ಮಲಗಿದೆ. ಆದರೆ ಸರಕಾರ ಮಾತ್ರ ಅತೀವ ನಿರ್ಲಕ್ಷ್ಯ ತೋರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸಾಧನೆಯ ಆಧಾರದ ಮೇಲೆ ಶಂಖ ಊದಿದರೆ ಪರಿಷತ್ ಚುನಾವಣೆ ಮೇಲೆ ಏನೂ ಪರಿಣಾಮ ಆಗಲ್ಲ. ನೀವು ಎಲ್ಲಿ ಕೂತರೂ ಚುನಾವಣೆ ಗೆಲ್ಲುತ್ತೀರಿ, ಹೇಗೆ ಗೆಲ್ಲಬೇಕು ಅಂತಾ ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ಅವರು ಬಿಜೆಪಿ ಪಕ್ಷದ ಕಾಳೆದದರು.
ಗೃಹ ಸಚಿವರಿಗೆ ಪ್ರತ್ಯುತ್ತರ:
ತಮ್ಮ ಬಗ್ಗೆ ಹಗುರವಾಗಿ ಮಾತನಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ ಅವರ ರೀತಿ ನಾವು ದಿನಕ್ಕೆರಡು ಬಾರಿ ಕ್ಯಾಮೆರಾ ಮುಂದೆ ಬರಲು ಆಗುತ್ತಾ? ಎಂದು ಗೃಹ ಸಚಿವರು ಕೇಳಿದ್ದಾರೆ. ಹೌದು, ನನಗೆ ಈಗ ಕೆಲಸ ಇಲ್ಲ. ಹಾಗಾಗಿ ಹೆಚ್ಚಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತೇನೆ. ಅವರು ನಾಡಿನ ಗೃಹ ಸಚಿವರು. ಅವರಿಗೆ ತುಂಬಾ ಕೆಲಸ ಇರುತ್ತದೆ ಎಂದರು.
ಬಿಜೆಪಿ ನಾಯಕರಷ್ಟು ನಾನು ಪ್ರಚಾರ ತೆಗೆದುಕೊಂಡಿಲ್ಲ. ನನಗೇನೂ ಕೆಲಸ ಇಲ್ಲ. ಅಧಿಕಾರ ಇಲ್ಲ, ಅದಕ್ಕೆ ಕ್ಯಾಮೆರಾ ಮುಂದೆ ಬರುತ್ತೇನೆ. ಸಚಿವರು ಹೇಳಿದ್ದು ಸರಿಯಾಗಿಯೇ ಇದೆ. ನನ್ನ ಪ್ರಕಾರ ಇಂತಹ ಗೃಹ ಸಚಿವರು ಈವರೆಗೆ ಬರಲೇ ಇಲ್ಲ ಎಂದು ವ್ಯಂಗ್ಯವಾಡಿದರು.
ನನ್ನ ಬಗ್ಗೆ ಅವರು ಲಘುವಾಗಿ ಮಾತಾಡುವ ಅವಶ್ಯಕತೆ ಇಲ್ಲ. ಪಾಪ ಅವರು ಜನರ ಕಷ್ಟ ಕೇಳಲು ನಿದ್ದೆ ಕೂಡ ಮಾಡುತ್ತಿಲ್ಲ ಅನಿಸುತ್ತಿದೆ. ಜ್ಞಾನೇಂದ್ರ ಅವರ ಶಿವಮೊಗ್ಗ ಜಿಲ್ಲೆ ಹೇಗಿದೆ? ಅಡಿಕೆ ಬೆಳೆಗಾರರು ಹೇಗಿದ್ದಾರೆ? ಅವರು ನೋಡಿದ್ದರಾ? ಅವರ ಕಷ್ಟ ಸುಖ ವಿಚಾರ ಮಾಡಿದ್ದೀರಾ ಜ್ಞಾನೇಂದ್ರ ಅವರೇ? ಎಂದು ಹೆಚ್ಡಿಕೆ ತರಾಟೆಗೆ ತೆಗೆದುಕೊಂಡರು.
ಸೋಮವಾರ ಅಭ್ಯರ್ಥಿಗಳ ಪಟ್ಟಿ:
ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಪ್ರಕಟಣೆ ಮಾಡಲಾಗುವುದು. ಇಂದು ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ನಮಗೆ ಶಕ್ತಿ ಇರುವ ಆರು ಅಥವಾ ಎಂಟು ಕ್ಷೇತ್ರಗಳಲ್ಲಿ ನಾವು ಸ್ಪರ್ಧೆ ಮಾಡುತ್ತೇವೆ. ಕೋಲಾರ ಅಭ್ಯರ್ಥಿ ನಾಳೆ ಸಂಜೆ ತೀರ್ಮಾನ ಮಾಡಲಾಗುವುದು. ಮಂಡ್ಯದಲ್ಲಿ ಹಾಲಿ ಸದಸ್ಯರೇ ಮರು ಸ್ಫರ್ಧೆ ಮಾಡುತ್ತಿದ್ದಾರೆ. ದೇವೇಗೌಡರ ಜತೆ ಅಂತಿಮ ಚರ್ಚೆ ಮಾಡಿ ಅಂತಿಮ ಪ್ರಕಟ ಮಾಡುತ್ತೇವೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ನಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಸಂದೇಶ್ ನಾಗರಾಜ್ ಮತ್ತು ಸಿ.ಆರ್. ಮನೋಹರ್ ಮತ್ತೆ ಪಕ್ಷಕ್ಕೆ ವಾಪಸ್ ಬರುವ ವಿಚಾರ ನನ್ನ ಮುಂದೆ ಪ್ರಸ್ತಾಪ ಇಲ್ಲ. ನಮ್ಮ ಮೇಲೆ ನಂಬಿಕೆ ಇಲ್ಲ ಅಂತ ಅವರು ಹೋದವರು. ಮೂರು ವರ್ಷದ ಹಿಂದೆಯೇ ಪಕ್ಷ ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮೈಸೂರಿನಲ್ಲಿ ಜಿ.ಟಿ.ದೇವೇಗೌಡ ಕುಟುಂಬದ ಸ್ಫರ್ಧೆ ವಿಚಾರ ನನ್ನ ಮುಂದೆ ಚರ್ಚೆ ಆಗಿಲ್ಲ. ಸಾ.ರಾ.ಮಹೇಶ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಬಗ್ಗೆಯೂ ನನ್ನ ಮುಂದೆ ಯಾವುದೇ ಪ್ರಸ್ತಾಪ ಬಂದಿಲ್ಲ. ಹಾಗಾಗಿ ನಾನು ಉತ್ತರ ಕೊಡುವುದು ಅನವಶ್ಯಕ ಎಂದು ಅವರು ತಿಳಿಸಿದರು.