ಬೆಂಗಳೂರು: ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಎರಡು ನಾಲಗೆಯ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸರಿಯಾಗಿ ಮಂಗಳಾರತಿ ಆಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬಿಡದಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಮತಾಂತರ ನಿಷೇಧ ಕಾಯ್ದೆ ಬಗ್ಗೆ ವೀರಾವೇಶದಿಂದ ಭಾಷಣ ಬಿಗಿದರು. ಕ್ರೈಸ್ತ ಫಾದರ್’ಗಳ ಜತೆಗೆ ಸಭೆ ಮಾಡಿದ್ದರು. ಮತಾಂತರ ನಿಷೇಧ ಮಸೂದೆ ಮಂಡಿಸುವ ಬಗ್ಗೆ ಚಿಂತನೆ ನಡೆಸಿದ್ದರು. ಈಗ ಬೆಳಗಾವಿ ಅಧಿವೇಶನದಲ್ಲಿ ಅವರ ಮುಖಕ್ಕೆ ಮಂಗಳಾರತಿಯಾಗಿದೆ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಗ ಕಾನೂನು ಮಂತ್ರಿ ಆಗಿದ್ದ ಜಯಚಂದ್ರ ಅವರು ಈ ಕಾಯ್ದೆಯ ನೋಟ್ ತಂದಾಗ ಸಹಿ ಹಾಕಿದ್ದರು. ಬಳಿಕ ಅದನ್ನು ಆಗಿನ ಸಾಮಾಜ ಕಲ್ಯಾಣ ಖಾತೆ ಸಚಿವ ಆಂಜನೇಯ ಅವರ ಮುಂದೆ ಕೂಡ ಈ ನೋಟ್ ಹೋಗಿತ್ತು. ಈಗ ಯಾವ ಮುಖ ಹೊತ್ತುಕೊಂಡು ಕಾಂಗ್ರೆಸ್ ನಾಯಕರು ಮತಾಂತರದ ಬಗ್ಗೆ ಮಾತನಾಡ್ತಾರೆ. ಇವರು ಈ ನಾಡಿನ ಜನತೆಗೆ ರಕ್ಷಣೆ ಕೊಡ್ತಾರ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನೆ ಮಾಡಿದರು.
ಈಗಾಗಲೇ ಕಾಂಗ್ರೆಸ್ ನಾಯಕರು ಅಧಿಕಾರ ಹಿಡಿದೆವು ಎನ್ನುವ ಭ್ರಮಾ ಲೋಕದಲ್ಲಿದ್ದಾರೆ. ಆ ಭ್ರಮೆಯನ್ನು ಜನರೇ ಇಳಿಸುತ್ತಾರೆ, ಸ್ವಲ್ಪ ಕಾದು ನೋಡೋಣ. ಈ ಕಾಯ್ದೆಯ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ, ಯಾವ ಮುಖ ಇದೆ ಎಂದು ಅವರು ಕಿಡಿಕಾರಿದರು.
ಇವರ ಸರ್ಕಾರ ಇದ್ದಾಗ ಈ ಮಸೂದೆಯನ್ನು ಕ್ಯಾಬಿನೆಟ್ ಮುಂದೆ ಇವರೇ ತಂದಿದ್ದರು. ಈಗ ಬಿಜೆಪಿಯವರಿಗೆ ಅವರೇ ಅಸ್ತ್ರ ಕೊಟ್ಟಿದ್ದಾರೆ. ರಾಜ್ಯದ ಜನರಿಗೆ ರಕ್ಷಣೆ ಕೊಡುವ ಬಗ್ಗೆ ಈ ಮಹಾನ್ ನಾಯಕರಿಂದ ನಾವು ಪಾಠ ಕಲಿಯಬೇಕಿಲ್ಲ. 2023ಕ್ಕೆ ಜೆಡಿಎಸ್ ಶಕ್ತಿ ಏನೆಂದು ಜನ ತೋರಿಸುತ್ತಾರೆ ಎಂದು ಮಾಜಿ ಮಖ್ಯಮಂತ್ರಿಗಳು ಟೀಕಾಪ್ರಹಾರ ನಡೆಸಿದರು.
ಸಿದ್ದರಾಮಯ್ಯ ಅವರ ನಿಜ ಬಣ್ಣ ಅಧಿವೇಶನದಲ್ಲಿ ಬಯಲಾಗಿದೆ. ಬಿಜೆಪಿಯವರು ಹೊಡೆದಂಗೆ ಮಾಡ್ತಾರೆ, ಕಾಂಗ್ರೆಸ್ ನವರು ಅತ್ತಂಗೆ ಮಾಡ್ತಾರೆ. ಇವೆರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದ ಅವರು, ಮತಾಂತರ ನಿಷೇಧ ಕಾಯ್ದೆ ಬಗ್ಗೆ ಜೆಡಿಎಸ್ ವಿರೋಧ ಇದೆ. ನಮ್ಮ ಶಾಸಕರು ವಿರೋಧವಾಗಿ ಮತ ಹಾಕಿದ್ದಾರೆ ಎಂದು ಅವರು ಹೇಳಿದರು.
ಮೇಕೆದಾಟು: ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಟೀಕೆ
ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು 2013ರಲ್ಲಿ ಪಾದಯಾತ್ರೆ ಮಾಡಿದರು ಕಾಂಗ್ರೆಸ್ ನಾಯಕರು. ಪ್ರತಿ ವರ್ಷ 10 ಸಾವಿರ ಕೋಟಿ ಕೊಡ್ತೇವೆಂದು ಹೇಳಿದ್ದರು. ಕಳೆದ ದಿನ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ಮಾಡಿದ್ದೇನೆ. ವರ್ಷಕ್ಕೆ 10 ಸಾವಿರ ಕೋಟಿ ಕೊಡುತ್ತೇವೆ ಎಂದು ನಂಬಿಸಿದ್ದರು. ಈಗ 5 ವರ್ಷಕ್ಕೆ 8 ಸಾವಿರ ಕೋಟಿ ಕೊಟ್ಟಿದ್ದಾರೆ. ಈ 8 ಸಾವಿರ ಕೋಟಿಯಲ್ಲಿ ರೈತರ ಜಮೀನಿಗೆ ಒಂದು ಹನಿ ನೀರು ಹೋಯ್ತಾ? ಮುಖ್ಯ ಕಾಲುವೆಯಲ್ಲಿ ಹನಿ ನೀರು ಹರಿಯಲಿಲ್ಲ. ಗುತ್ತಿಗೆದಾರರ ಜತೆ ಸೇರಿ ದುಡ್ಡು ಹಂಚಿಕೊಂಡರು. ಇದು ಇವರ ಸಾಧನೆ. ಈಗ ಮೇಕೆದಾಟು ಬಗ್ಗೆ ರೌಂಡ್ ಹಾಕಿಕೊಂಡು ಬರ್ತಾರಂತೆ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.
ಕನಕಪುರ, ರಾಮನಗರ, ಬಿಡದಿ ಮಾರ್ಗವಾಗಿ 9 ದಿನ ಪಾದಯಾತ್ರೆ ಮಾಡ್ತಾರಂತೆ. ಯಾವ ಪುರುಷಾರ್ಥಕ್ಕೆ ಪಾದಯಾತ್ರೆ ಮಾಡ್ತಾರೆ ಇವರು? ಜೆಡಿಎಸ್ ಕೊಟ್ಟ ನೀರಾವರಿಗೂ ಕಾಂಗ್ರೆಸ್ ನೀರಾವರಿ ಕುರಿತ ಬೂಟಾಟಿಕೆಗೂ ಬಹಳ ವ್ಯತ್ಯಾಸವಿದೆ. ಜನರ ಪರವಾಗಿ, ನೀರಾವರಿ ಬಗ್ಗೆ ಮೊದಲು ರಾಜ್ಯದಲ್ಲಿ ಪಾದಯಾತ್ರೆ ಪ್ರಾರಂಭವಾಗಿದ್ದೆ ಮೊದಲು ದೇವೇಗೌಡರಿಂದ. ಈಗ ಅದೇ ಪರಿಕಲ್ಪನೆಯನ್ನು ಹೈಜಾಕ್ ಮಾಡಿಕೊಂಡು ಈ ಭಾಗದ ಜನರನ್ನ ಮರಳು ಮಾಡಲು ಹೊರಟ್ಟಿದ್ದಾರೆ ಎಂದು ಕುಮಾರಸ್ವಾಮಿ ಅವರು ನೇರವಾಗಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಜನರಿಗೆ ಕಣ್ಣೊರೆಸುವ ತಂತ್ರ ಅನುಸರಿಸುತ್ತಿವೆ. ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಮೇಕೆದಾಟು ಅನುಷ್ಠಾನ ತರಲು ಸಾಧ್ಯವಿಲ್ಲ. ಆ ಯೋಜನೆ ಜಾರಿ ಜೆಡಿಎಸ್ ಪಕ್ಷದಿಂದ ಮಾತ್ರ ಜಾರಿ ಸಾಧ್ಯ. ನಾವು ಈ ಮೊದಲೇ ರಾಜ್ಯಪಾಲರಿಗೂ ಮನವಿ ಕೊಟ್ಟಿದ್ದೆವು. ಮುಖ್ಯಮಂತ್ರಿಗೂ ಈ ಬಗ್ಗೆ ಮನವಿ ಕೊಟ್ಟಿದ್ದೆವು. ಪಕ್ಷದ ವತಿಯಿಂದ ದೊಡ್ಡ ಹೋರಾಟ ಮಾಡ್ತೇವೆಂದು ಹೇಳಿದ್ದೆವು ಎಂದು ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.
ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುವ ನಿಟ್ಟಿನಲ್ಲಿ ನಾವು ಪಾದಯಾತ್ರೆ ಮಾಡ್ತೇವೆಂದು ಹೆದರಿ ಕಾಂಗ್ರೆಸ್ ನಾಯಕರು ತರಾತುರಿಯಲ್ಲಿ ಮೇಕೆದಾಟು ಪಾದಯಾತ್ರೆಗೆ ಹೊರಟ್ಟಿದ್ದಾರೆ. ಅವರು ಪಾದಯಾತ್ರೆ ಮಾದುತ್ತಿರುವುದು ಕೇವಲ ಮತಕ್ಕಾಗಿ. ದೇವೇಗೌಡರನ್ನು ಹೊರತಾಗಿ ಇನ್ಯಾವ ಕಾಂಗ್ರೆಸ್ ನಾಯಕರಿಂದ ಸಹ ನೀರಾವರಿಗೆ ಆದ್ಯತೆ ಸಿಕ್ಕಿಲ್ಲ ಎಂದು ಅವರು ತಿಳಿಸಿದರು.
ಜೆಡಿಎಸ್ ಪಕ್ಷದ ನಿಲುವು ಮೇಕೆದಾಟು ಅಣೆಕಟ್ಟು ಕಟ್ಟಲೇಬೇಕು ಎಂಬುದು. ಟೆಕ್ನಿಕಲ್ ಪಾಯಿಂಟ್ ಇಟ್ಟುಕೊಂಡು ಕೆಲಸ ಶುರುಮಾಡಬೇಕು. ಆದರೆ ಇವರಿಗೆ ಪ್ರಚಾರ ಬೇಕಿದೆ ಅಷ್ಟೇ ಎಂದು ಅವರು ಮಾತಿನ ಚಾಟಿ ಬೀಸಿದರು.
ರಾಮನಗರಕ್ಕೂ ನನಗೂ ಪೂರ್ವ ಜನ್ಮದ ಅನುಬಂಧವಿದೆ. ಟೀಕೆ ಟಿಪ್ಪಣಿಗಳಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಸಿಎಂ ಆಗಿ ಶಾಸಕನಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಯಾರಿಂದಲೂ ಸರ್ಟಿಫಿಕೇಟ್ ಬೇಕಾಗಿಲ್ಲ. ಅಭಿವೃದ್ಧಿ ಬಗ್ಗೆ ಸರ್ಟಿಫಿಕೇಟ್ ಬೇಕಾಗಿಲ್ಲ. ಜಿಲ್ಲೆಯ ಜನರು ನೀಡುವ ಸರ್ಟಿಫಿಕೇಟ್ ಮುಖ್ಯ ನನಗೆ. ಜಿಲ್ಲೆಯ ಜನರು ನನ್ನನ್ನು ಮನೆ ಮಗನಂತೆ ಕಂಡಿದ್ದಾರೆ ಎಂದರು.
ಜಿಲ್ಲೆಯ ನಾಯಕರೊಬ್ಬರು ಗಂದಸ್ತನದ ಬಗ್ಗೆ ಮಾತನಾಡಿದ್ದಾರೆ. ರಾಜಕಾರಣ ಮಾಡಲು ಗಂಡಸ್ತನ ಬೇಕಾಗಿಲ್ಲ. ಗಂಡಸ್ತನ ಇರಬೇಕಾಗಿರೋದು ರೌಡಿಸಂ ಮಾಡುವವರಿಗೆ. ಆದರೆ, ರಾಜಕೀಯಕ್ಕೆ ಮಾನವೀಯ ಗುಣಗಳಿರಬೇಕು. ಮಾನವೀಯತೆ, ತಾಯಿ ಹೃದಯ, ಹೃದಯ ವೈಶಾಲ್ಯತೆ ಜನಪ್ರತಿನಿಧಿಗಳಿಗೆ ಇರಬೇಕು. ಈ ಗುಣಗಳು ಇಲ್ಲದೇ ಇದ್ದರೆ ರಾಜಕಾರಣಕ್ಕೆ ಅಂತಹ ಜನ ನಾಲಾಯಕ್ಕು. ಪದ ಬಳಕೆ ಬಗ್ಗೆ ಜನ ಪ್ರತಿನಿಧಿಗಳಿಗೆ ಅರಿವಿರಬೇಕು. ನಾಲಗೆ ಇದೆ ಎಂದು ಹರಿದುಬಿಡೋದಲ್ಲ ಎಂದರು.
ಕ್ಷುಲ್ಲಕವಾದ ಮಾತುಗಳು ಅವರಿಗೆ ಇರುವ ಭಯ ತೋರಿಸುತ್ತದೆ. ಆತಂಕ ಅಸಹಾಯಕತೆಯಿಂದ ಮಾತಾಡಿದ್ದಾರೆ. ಇವರಿಗೆ ಜನ ಪ್ರತಿನಿಧಿಗಳಾಗಲು ಅರ್ಹತೆ ಇಲ್ಲ ಎಂದರು ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಹೆಚ್ಡಿಕೆ ಕಿಡಿ ಕಾರಿದರು.