ಬೆಂಗಳೂರು: ರಾಜ್ಯದಲ್ಲಿ ಮಂಕಿ ಪಾಕ್ಸ್ ಕಂಡುಬಂದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಕುರಿತಂತೆ ದೊಡ್ಡಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಮಂಕಿ ಪಾಕ್ಸ್ ಪ್ರಕರಣ ಕಂಡುಬಂದಿಲ್ಲ. ಈ ಕುರಿತು ವಿಮಾನ ನಿಲ್ದಾಣ, ಬಂದರುಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಮಾರ್ಗಸೂಚಿ ಪಾಲಿಸಲಾಗುತ್ತಿದೆ. ಇದಕ್ಕೆ ಬೇಕಾದ ಚಿಕಿತ್ಸೆಗೆ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿದೆ. ರಾಜ್ಯದೊಳಗೆ ಈ ಸೋಂಕು ನುಸುಳದಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ಜಯದೇವ ಹೃದ್ರೋಗ ಸಂಸ್ಥೆ ಹಾಗೂ ನೆಫ್ರೋ ಯುರಾಲಜಿ ಸಂಸ್ಥೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಸ್ಥರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಕಡತವನ್ನು ಅವರಿಗೆ ಕಳುಹಿಸಿಕೊಡಲಾಗಿದೆ. ನಿರ್ದೇಶಕರ ಅವಧಿ ಮುಂದುವರಿಕೆ ಕುರಿತು ಮುಖ್ಯಮಂತ್ರಿಗಳೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.


















































