ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಭಗವತಿ ಏತ ನೀರಾವರಿ ಯೋಜನೆ ಮತ್ತು ಭಗವತಿ, ಹಳ್ಳೂರು, ಬೇವೂರು ಹಾಗೂ ಸಂಗಾಪುರ ಕೆರೆಗಳಿಗೆ ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನಿಂದ (ಘಟಪ್ರಭಾ ನದಿಯಿಂದ) ನೀರನ್ನು ಎತ್ತಿ ತುಂಬಿಸುವ 346 ಕೋಟಿ ರೂಪಾಯಿ ಅಂದಾಜು ಮೊತ್ತದ ಹರಿ (flow irrigation) ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಮಂಜೂರಾತಿ ನೀಡಿದೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಂಚಿಕೆ ಆಗಿರುವ ಒಟ್ಟಾರೆ 303 ಟಿ.ಎಂ.ಸಿ. ಅಡಿ ನೀರಿನಲ್ಲಿ ಈ ಯೋಜನೆಯ 1.563 ಟಿ.ಎಂ.ಸಿ. ನೀರನ್ನು ಎತ್ತುವಳಿ ಮೂಲಕ ತುಂಬಿಸಲು ಕೃಷ್ಣ ಭಾಗ್ಯ ಜಲ ನಿಗಮದಿಂದ ಎರಡು ಹಂತದಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ದೊರೆತಿದೆ. ಒಟ್ಟು 14 ಗ್ರಾಮಗಳ 8390 ಹೆಕ್ಟೇರ್ ಕೃಷಿ ಭೂಮಿಗೆ ಈ ಯೋಜನೆಯ ಮೂಲಕ ನೀರುಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಭಗವತಿ ಏತ ನೀರಾವರಿ ಯೋಜನೆಗೆ ಒಟ್ಟಾರೆ ಅವಶ್ಯಕ 1.563 ಟಿ.ಎಂ.ಸಿ. ನೀರನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1, 2 ಮತ್ತು 3ರಡಿ ನೀರಿನ ಸಾಂದ್ರತೆಯನ್ನು 100%ರಂತೆ ಪರಿಗಣಿಸಿ ಲಭ್ಯವಾಗುವ ಉಳಿತಾಯದ ನೀರಿನ ಪ್ರಮಾಣದಲ್ಲಿ (ತಿಮ್ಮಾಪುರ ಏತ ನೀರಾವರಿ ಯೋಜನೆಯಲ್ಲಿ ಉಳಿತಾಯವಾಗುವ 0.48 ಟಿ.ಎಂ.ಸಿ. ನೀರಿನ ಪ್ರಮಾಣ ಒಳಗೊಂಡಂತೆ) ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಟ್ಟಾರೆ ನೀರಿನ ಬಳಕೆಗೆ ಹಂಚಿಕೆಯಾಗಿರುವ 303 ಟಿ.ಎಂ.ಸಿ. ನೀರಿನ ಹಂಚಿಕೆಯಲ್ಲಿ ಪರಿಗಣಿಸುವ ಕುರಿತು ಸರ್ಕಾರದ ಹಂತದಲ್ಲಿ ವಿವರವಾದ ಪರಿಶೀಲನೆ ನಡೆಸಿ ಈ ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ಮಂಡಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಹಳ್ಳೂರು, ಬೇವೂರು, ಸಂಗಾಪುರ, ಬಿಲಕೇರೂರು, ಅಚನೂರು, ಮೂಡಪಲಜೀವಿ, ಕಡ್ಲಿಮಟ್ಟಿ, ಮುಗಳೊಳ್ಳಿ, ಭಗವತಿ, ಮನಿಕಟ್ಟಿ, ಬೆನಕಟ್ಟಿ, ಶಿರೂರು, ತಿಮ್ಮಾಪುರ, ಅಚತಾಪುರ ಗ್ರಾಮಗಳು ಬರ ಪೀಡಿತ ಗ್ರಾಮಗಳಾಗಿರುತ್ತವೆ ಮತ್ತು ಬಾಗಲಕೋಟೆ ತಾಲ್ಲೂಕಿನ ಭಗವತಿ, ಹಳ್ಳೂರು, ಬೇವೂರು ಹಾಗೂ ಸಂಗಾಪೂರ ಕೆರೆಗಳು ಸಣ್ಣ ನೀರಾವರಿ ಕೆರೆಗಳಾಗಿದ್ದು, ತುಂಬಾ ಕಡಿಮೆ ಮತ್ತು ಅನಿಶ್ಚಿತ ಮಳೆ ಬೀಳುವ ಪ್ರದೇಶಗಳಲ್ಲಿ ಇರುವುದರಿಂದ ಸಂಪೂರ್ಣ ಭರ್ತಿಯಾಗದೇ ನೀರಿನ ಕೊರತೆಯನ್ನು ನೀಗಿಸುವ ಸಲುವಾಗಿ ಮತ್ತು ಆ ಗ್ರಾಮಗಳ ರೈತರುಗಳು ನೀರಾವರಿ ಸೌಲಭ್ಯವನ್ನು ಪಡೆಯುವುದಕ್ಕಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಭಗವತಿ ಗ್ರಾಮದ ಸುತ್ತಲಿನ ಸುಮಾರು 9,123 ಹೆಕ್ಟೇರ್ ಜಮೀನುಗಳು ಎತ್ತರದ ಪ್ರದೇಶದಲ್ಲಿದ್ದು (ತಿಮ್ಮಾಪುರ ಏತ ನೀರಾವರಿ ಮತ್ತು ಘಟಪ್ರಭಾ ಬಲದಂಡೆ ಕಾಲುವೆ ಅಚ್ಚುಕಟ್ಟು ನಡುವಿನ ಪ್ರದೇಶ) ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1,2 ಮತ್ತು 3ರ ಯಾವುದೇ ಯೋಜನೆಗಳಿಂದ ನೀರಾವರಿಗೆ ಒಳಪಟ್ಟಿರುವುದಿಲ್ಲ. ಬೇಸಿಗೆ ಕಾಲದಲ್ಲಿ ಕೆರೆಗಳ ವ್ಯಾಪ್ತಿಯಲ್ಲಿ ಬರುವ ಭೂ ಪ್ರದೇಶದಲ್ಲಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಕೊಳವೆ ಬಾವಿಗಳಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರನ್ನು ಪೂರೈಸುವ ಅವಶ್ಯಕತೆಯನ್ನು ಮನಗಂಡು ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

















































