ಬೆಂಗಳೂರು: ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಭಾರತೀಯ ಮಾನವಸಹಿತ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತಿಗೆ ಸ್ಥಳಾಂತರ ಮಾಡುವ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಈ ಕುರಿತಂತೆ ಅವರು ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ನಿಮ್ಮ ಬಿಡುವಿಲ್ಲದ ಸಮಯದಲ್ಲೂ ನಮ್ಮ ಮನವಿಯತ್ತ ಗಮನಹರಿಸಿ ಎಂದು ಕೋರುತ್ತೇನೆ. ಕರ್ನಾಟಕ ನಾಡಿನ ಜನರ ಹೆಮ್ಮೆ, ಆತ್ಮಗೌರವಕ್ಕೆ ಸಂಬಂಧಪಟ್ಟ ಯೋಜನೆ ವಿಚಾರವಾಗಿ ನಾನು ಇಂದು ನಿಮ್ಮ ಗಮನ ಸೆಳೆಯುತ್ತಿದ್ದೇನೆ. ಇದು ನನ್ನ ಕರ್ತವ್ಯವೂ ಆಗಿದೆ ಎಂದವರು ಪತ್ರದಲ್ಲಿ ಗಮನಸೆಳೆದಿದ್ದಾರೆ.
ಹಲವು ದಶಕಗಳಿಂದ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಕೇಂದ್ರ ಕಛೇರಿ ಹಾಗೂ ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡುತ್ತಾರೆ. ನಿಮಗೆ ತಿಳಿದಿರುವಂತೆ 2007ರಿಂದ ಇಸ್ರೋ ‘ಮಾನವಸಹಿತ ಬಾಹ್ಯಾಕಾಶ ಗಗನಯಾನ’ ಯೋಜನೆಗೆ ಬೇಕಾದ ತಂತ್ರಜ್ಞಾನವನ್ನು ಸಿದ್ಧಪಡಿಸಿಕೊಂಡು ಬಂದಿದೆ ಎಂದಿರುವ ಡಿ.ಕೆ.ಶಿ., ಇಸ್ರೋ ಸಂಸ್ಥೆ 2023ರಲ್ಲಿ ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನದ ಜಿಎಸ್ಎಲ್ವಿ ರಾಕೆಟ್ ಉಡಾವಣೆಗೆ ಸಿದ್ಧತೆ ನಡೆಸಿದೆ. ಇದು ಯಶಸ್ವಿಯಾದರೆ ಅಮೆರಿಕಾ, ಚೀನಾ, ಸೋವಿಯತ್ ಯೂನಿಯನ್ ನಂತರ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಭಾರತವಾಗಲಿದೆ ಎಂದಿದ್ದಾರೆ.
ಕನ್ನಡಿಗರು ಭಾವನಾತ್ಮಕ ವ್ಯಕ್ತಿಗಳಾಗಿದ್ದು, ಇಂತಹ ರಾಷ್ಟ್ರೀಯ ಕಾರ್ಯಕ್ರಮಗಳ ಆತಿಥ್ಯವನ್ನು ಬಹಳ ಹೆಮ್ಮೆಯಿಂದ ವಹಿಸಿಕೊಳ್ಳುತ್ತಾರೆ. ಅದೇ ರೀತಿ ಈ ಗಗನಯಾನ ಯೋಜನೆ ಬಗ್ಗೆಯೂ ಕನ್ನಡಿಗರು ಭಾವನಾತ್ಮಕ ಸಂಬಂಧ, ಮನಸ್ಥಿತಿ ಇಟ್ಟುಕೊಂಡಿದ್ದಾರೆ ಎಂದು ಗಮನಸೆಳೆದಿರುವ ಅವರು, ಈ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತಿಗೆ ಸ್ಥಳಾಂತರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಕೇಳಿ ಕನ್ನಡಿಗರು ಬೇಸರಗೊಂಡಿದ್ದಾರೆ. ಈ ಯೋಜನೆ ಸ್ಥಳಾಂತರ ಆಗಿದ್ದೇ ಆದರೆ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವನ್ನು ಕಡೆಗಣಿಸಿ, ಅದಕ್ಕೆ ದ್ರೋಹ ಬಗೆದು, ಕನ್ನಡಿಗರ ಭಾವನೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಭಾವಿಸಲಾಗುವುದು. ಅಷ್ಟೇ ಅಲ್ಲ, ಇದು ಕನ್ನಡಿಗರ ಸ್ವಾಭಿಮಾನ ಹಾಗೂ ಆತ್ಮಗೌರವಕ್ಕೆ ಧಕ್ಕೆ ತರಲಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ದೇಶದ ಒಂದು ಭಾಗದ ಜನ ತಮಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಭಾವಿಸಿದರೆ ಅದು ಭವಿಷ್ಯದಲ್ಲಿ ಗಂಭೀರ ಪರಿಣಾಮ ಬೀರಲಿದೆ ಎಂದಿದ್ದಾರೆ.
ಕೂಡಲೇ ಮಧ್ಯಪ್ರವೇಶಿಸಿ ಮಾನವಸಹಿತ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತಿಗೆ ಸ್ಥಳಾಂತರ ಮಾಡುವ ಪ್ರಯತ್ನವನ್ನು ತಡೆಯಬೇಕು ಎಂದವರು ಕೋರಿದ್ದಾರೆ.