ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಹಗರಣಗಳ ವಿರುದ್ದ ವಾಗ್ದಾಳಿ ನಡರಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈ ಕರ್ಮಕಾಂಡಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ಅಕ್ರಮಗಳ ಬಗ್ಗೆ ಗಮನಸೆಳೆದ ಅವರು, ರಾಯಚೂರು ಜಿಲ್ಲೆ ಲಿಂಗಸೂಗೂರು ಹಾಗೂ ದೇವದುರ್ಗಾ ತಾಲೂಕುಗಳಲ್ಲಿ ನಾರಾಯಣಪುರ ಬಲದಂಡೆ ನಾಲೆಯ 1 ರಿಂದ 15 ವಿತರಣಾ ನಾಲೆಗಳ ಆಧುನೀಕರಣ ಮಾಡಲು (ಈ, ಆರ್,ಎಮ್) 23/07/2021 ರಲ್ಲಿ 828 ಕೋಟಿ ರೂಪಾಯಿ ಮೊತ್ತದ ಹಾಗೂ 16 ರಿಂದ 18 ಉಪಕಾಲುವೆಗಳ ಅಂದಾಜು ವೆಚ್ಚ 791 ಕೋಟಿ ರೂಪಾಯಿಯ ಒಟ್ಟು 1,619 ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿದೆ. ಈ ಎರಡೂ ಟೆಂಡರ್ ಎನ್.ಡಿ ವಡ್ಡರ್ ಅವರ ಹೆಸರಿಗಾಗಿದೆ, ಇವರು ಲಿಂಗಸೂಗೂರಿನ ಮಾಜಿ ಶಾಸಕರಾದ ಮಾನಪ್ಪ ವಜ್ಜಲ್ ಅವರ ಸಹೋದರ. ಕೆಲಸವೇ ಆಗದೆ 425 ಕೋಟಿ ರೂಪಾಯಿ ಬಿಲ್ ಪಾವತಿಯಾಗಿದೆ ಎಂದು ದೂರಿದರು.
ಹಾಲಿ ಶಾಸಕರಾದ ಹುಲಿಗೇರಿ ಅವರು ಮುಖ್ಯಮಂತ್ರಿಗಳಿಗೆ, ಕೇಂದ್ರ ಹಾಗೂ ರಾಜ್ಯದ ನೀರಾವರಿ ಸಚಿವರಿಗೆ, ಜಲ ಸಂಪನ್ಮೂಲ ಇಲಾಖೆಯ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದಾದ ನಂತರ ಮುಖ್ಯಮಂತ್ರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಗಳು ಪತ್ರ ಬರೆದ ಮೇಲೆ ಒಂದು ತಾಂತ್ರಿಕ ಸಮಿತಿಯನ್ನು ರಚನೆ ಮಾಡಲಾಗಿದೆ. ಅದರಲ್ಲಿ ರಾಮ್ ಪುರೆ, ಶಿವಕುಮಾರ್, ಅಶೋಕ್ ಹೊಸನಾಡ್, ರಾಜೇಂದ್ರ, ಪ್ರದೀಪ್ ಮಿತ್ರ ಮಂಜುನಾಥ್ ಸೇರಿದಂತೆ 6 ಜನ ಸದಸ್ಯರಿದ್ದಾರೆ. ಈ ಸಮಿತಿ ಸ್ಥಳಕ್ಕೆ ಭೇಟಿನೀಡಿ ಒಂದು ವರದಿ ನೀಡಿದೆ ಎಂದವರು ಹೇಳಿದ್ದಾರೆ.
ಸಮಿತಿ ನೀಡಿದ ವರದಿಯಲ್ಲಿ ಈ ಮೊದಲೇ ಮಣ್ಣು ತುಂಬಿಸುವ ಕಾರ್ಯ ಮಾಡಿ ಮುಗಿಸಿರುವುದರಿಂದ ಈಗ ಮತ್ತೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಣ್ಣು ತುಂಬಿಸುವ ಅಗತ್ಯ ವೇನಿದೆ?, ಇವರು ಮಣ್ಣು ತುಂಬಲಾಗಿದೆ ಎಂದು ತೋರಿಸುತ್ತಿರುವ ಲೆಕ್ಕ ಸುಳ್ಳು ಎಂದು ಹೇಳಿದೆ. ನಿಯಮದ ಪ್ರಕಾರ ಕೆಂಪು ಮಣ್ಣು ಇರುವ ಕಡೆ ಗ್ರಾವೆಲ್ ಹಾಕಬೇಕಾದ ಅಗತ್ಯವಿಲ್ಲ, ಆದರೆ ಇಲ್ಲಿ ಗ್ರಾವೆಲ್ ಹಾಕಿದ್ದೇವೆ ಎಂದು ಸುಳ್ಳು ಲೆಕ್ಕ ತೋರಿಸಿದ್ದಾರೆ ಎಂದವರು ಆರೋಪಿಸಿದ್ದಾರೆ.
ಈ ಯೋಜನೆಯಲ್ಲಿ ಇಂಜಿನಿಯರ್ ಗಳು, ಕಂಟ್ರಾಕ್ಟರ್ ಗಳು ಹಾಗೂ ಸರ್ಕಾರ ಎಲ್ಲರೂ ಸೇರಿ ಗೋಲ್ಮಾಲ್ ಮಾಡಿದ್ದಾರೆ. ಹಿಂದೊಮ್ಮೆ ಆಧುನೀಕರಣಗೊಂಡ ಕಾಲುವೆಗಳಿಗೆ ಮತ್ತೆ ಮರು ನಿರ್ಮಾಣ ಮಾಡುವುದಾಗಿ ಹೇಳಿ ದುಡ್ಡು ಹೊಡೆಯಲಾಗಿದೆ. ಮಣ್ಣು ತುಂಬಿಸಿದ್ದೇವೆ, ಕಲ್ಲು ಬಂಡೆ ಬ್ಲಾಸ್ಟ್ ಮಾಡಿದ್ದೇವೆ, ಮುರಮ್ ಹಾಕಿದ್ದೇವೆ ಎಂದೆಲ್ಲ ಸುಳ್ಳು ಲೆಕ್ಕ ನೀಡಿ ಬಿಲ್ ಪಡೆಯಲಾಗಿದೆ ಎಂದು ದೂರಿದ ಸಿದ್ದರಾಮಯ್ಯ, ಎಸ್ಟಿಮೇಟ್ ಕಮಿಟಿಯ ಅಧ್ಯಕ್ಷ ಬಿಜೆಪಿ ಶಾಸಕ ಅಭಯ್ ಪಾಟೀಲ್. ದೊಡ್ಡನಗೌಡ ಪಾಟೀಲ್ ಕೂಡ ಕಮಿಟಿಯ ಒಬ್ಬ ಸದಸ್ಯ. ಈ ಎಸ್ಟಿಮೇಟ್ ಕಮಿಟಿಯವರು ಪರಿಶೀಲನೆ ನಡೆಸಲು ಸ್ಥಳಕ್ಕೆ ಹೋದರೆ ಕಂಟ್ರಾಕ್ಟರ್ ಪರವಾದ ಗೂಂಡಾಗಳು ಇವರನ್ನು ಒಳಗೆ ಬಿಡಲೇ ಇಲ್ಲ. ಈ ವಿಚಾರ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಯಾಗಿದೆ. ಕಂಟ್ರಾಕ್ಟರ್ ಗೆ ಸರ್ಕಾರದ ಕುಮ್ಮಕ್ಕು ಇಲ್ಲದೆ ಹೀಗೆ ತಡೆದು ಕಳಿಸೋಕೆ ಆಗುತ್ತಾ? ಈ ವರೆಗೆ ಕಂಟ್ರಾಕ್ಟರ್ ಅಥವಾ ಅವನ ಹಿಂಬಾಲಕ ಗೂಂಡಾಗಳ ಮೇಲೆ ಯಾವ ಕ್ರಮ ಕೈಗೊಂಡಿಲ್ಲ. ದೂರು ನೀಡಲು ಹೋದರೆ ಮೇಲಿನಿಂದ ಒತ್ತಡ ಹಾಕಿ ದೂರು ನೀಡದಂತೆ ತಡೆಯಲಾಗಿದೆ ಎಂದರು.
ಸುಮಾರು 800 ಕೋಟಿ ರೂಪಾಯಿಯಷ್ಟು ಹಣವನ್ನು ಮಣ್ಣು ತುಂಬಿಸುವುದಾಗಲೀ, , ಮುರಮ್ ಹಾಕುವುದಾಗಲೀ ಮಾಡದೆ ದುಡ್ಡು ನುಂಗಲಾಗಿದೆ ಎಂದ ಅವರು, ಈ ಹಗರಣವನ್ನು ಸದನ ಸಮಿತಿಗೆ ವಹಿಸುವುದು ಉತ್ತಮ, ಸರ್ಕಾರ ಸದನ ಸಮಿತಿಗೆ ಪೊಲೀಸ್ ಭದ್ರತೆ ನೀಡಿ, ಸ್ಥಳ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು. ಇಲ್ಲಿ ಕಂಡುಬರುತ್ತಿರುವ ಎಲ್ಲಾ ಅವ್ಯವಹಾರಗಳು ನಡೆದಿದ್ದೇ ಆದರೆ ಅಷ್ಟೂ ಹಣವನ್ನು ವಸೂಲಿ ಮಾಡಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಂಬಂಧಿತ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸುತ್ತೇನೆ. ಇದಕ್ಕೆ ಜಲ ಸಂಪನ್ಮೂಲ ಇಲಾಖೆಯ ಸಚಿವರೇ ನೇರ ಹೊಣೆಯಾಗಿದ್ದು, ಹಗರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದೂ ಒತ್ತಾಯಿಸಿದರು.
ಸರ್ಕಾರ ಭ್ರಷ್ಟಾಚಾರವನ್ನು ಬೆಂಬಲಿಸುತ್ತಾ ಇದ್ದರೆ, ಸರ್ಕಾರ ಮಾನಗೆಟ್ಟು ನಿಂತಿದ್ದರೆ ನಾವು ಎಷ್ಟೇ ನ್ಯಾಯಕ್ಕಾಗಿ ಕೂಗಾಡಿದರೂ ಅದರಿಂದ ಪ್ರಯೋಜನವಾಗಲ್ಲ. ನ್ಯಾಯಾಲಯದಲ್ಲಿ ಹೋರಾಟ ಮಾಡುವ ಅವಕಾಶಗಳ ಬಗ್ಗೆಯೂ ಯೋಚನೆ ಮಾಡುತ್ತೇವೆ ಎಂದ ಸಿದ್ದರಾಮಯ್ಯ ಅವರು, ಸರ್ಕಾರ ಕಮಿಷನ್ ಹಗರಣದ ಬಗ್ಗೆ ಕ್ರಮ ಕೈಗೊಳ್ಳದೆ ಹೋದರೆ ನಾವು ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಈ ಹಿಂದೆ ಕೆಂಪಣ್ಣನವರು ಹೇಳಿದ್ದರು, ಆದರೆ ಈಗ ಕೆಂಪಣ್ಣನವರು ಮುಖ್ಯಮಂತ್ರಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡು ಸುಮ್ಮನಾಗಿದ್ದಾರೆ. ಆದರೆ ಅವರು ಪ್ರಧಾನಿಗಳಿಗೆ ಬರೆದ ಪತ್ರ ಸುಳ್ಳಾಗಲು ಸಾಧ್ಯವಿಲ್ಲ ಎಂದರು.







































































