ಬೆಂಗಳೂರು: ಕರ್ನಾಟಕದ 25 ಸ್ಥಾನಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಸ್ಥಳೀಯ ಸಂಸ್ಥೆಗಳ ಸದಸ್ಯರಿಂದ ವಿಧಾನ ಪರಿಷತ್ಗೆ ಆಯ್ಕೆ ನಡೆದಿದ್ದು, ಚುನಾವಣೆ ನಡೆದ 25 ಸ್ಥಾನಗಳ ಪೈಕಿ ಬಿಜೆಪಿ 12 ಕಡೆ ಜಯಭೇರಿ ಭಾರಿಸಿದೆ. ಕಾಂಗ್ರೆಸ್ 11 ಸ್ಥಾನಗಳನ್ನು ಜಯಿಸಿದರೆ, ಜೆಡಿಎಸ್ 1 ಸ್ಥಾನ ಗೆದ್ದಿದೆ. ಒಂದು ಸ್ಥಾನ ಪಕ್ಷೇತರರ ಪಾಲಾಗಿದೆ.
ಬೆಂಗಳೂರು ನಗರ:
ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಅಖಾಡವೆನಿಸಿದ್ದ ಬೆಂಗಳೂರು ನಗರ ವಿಧಾನಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಮಲ ಅಭ್ಯರ್ಥಿ ಹೆಚ್.ಎಸ್.ಗೋಪಿನಾಥ್ ರೆಡ್ಡಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ನ ಯೂಸುಫ್ ಷರೀಫ್ಗೆ (KGF ಬಾಬು) ಹೀನಾಯ ಸೋಲುಂಡಿದ್ದಾರೆ.
ಮತಗಳು ವಿವರ:
- ಹೆಚ್.ಎಸ್. ಗೋಪಿನಾಥ್ ರೆಡ್ಡಿ (ಬಿಜೆಪಿ) 1,227 ಮತಗಳು
- ಯೂಸುಫ್ ಷರೀಫ್ (ಕಾಂಗ್ರೆಸ್) 830 ಮತಗಳು
ಬೆಂಗಳೂರು ಗ್ರಾಮಾಂತರ ಜಿಲ್ಲೆ:
ಬೆಂಗಳೂರು ಗ್ರಾಮಾಂತರ ಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ಜಯಭೇರಿ ಭಾರಿಸಿದ್ದಾರೆ. ಕಾಂಗ್ರೆಸ್ ಹುರಿಯಾಳು ಎಸ್.ರವಿ ಅವರು ಜೆಡಿಎಸ್ನ ಹೆಚ್.ಎಂ.ರಮೇಶ್ಗೌಡ ಅವರ ಪುನರಾಯ್ಜೆಯ ಕನಸನ್ನು ಭಗ್ನಗೊಳಿಸಿದ್ದಾರೆ.
ಮತಗಳ ವಿವರ:
- ಎಸ್.ರವಿ (ಕಾಂಗ್ರೆಸ್) 2,262 ಮತಗಳು
- ಹೆಚ್.ಎಂ.ರಮೇಶ್ಗೌಡ (ಜೆಡಿಎಸ್) 1,540 ಮತಗಳು
- ನಾರಾಯಣಸ್ವಾಮಿ (ಬಿಜೆಪಿ) 54 ಮತಗಳು.
ಬೆಳಗಾವಿ ಜಿಲ್ಲೆ:
ಬಿಜೆಪಿಯೊಳಗಿನ ಸಮರಕ್ಕೆ ಸಾಕ್ಷಿಯಾಗಿದ್ದ ಬೆಳಗಾವಿ ಜಿಲ್ಲೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕುಟುಂಬ ಆಘಾತ ನೀಡಿದೆ.
ಬೆಳಗಾವಿ ದ್ವಿಸದಸ್ಯ ಪರಿಷತ್ ಕ್ಷೇತ್ರದ ಫಲಿತಾಂಶದಂತೆ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಎರಡನೇ ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆದ್ದಿದ್ದಾರೆ. ಚನ್ನರಾಜ ಹಟ್ಟಿಹೊಳಿ ಅವರು 3718 ಮತಗಳನ್ನು ಪಡೆದಿದ್ದಾರೆ .
ಶಿವಮೊಗ್ಗ ಜಿಲ್ಲೆ:
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿನಿಸುತ್ತಿರುವ ಶಿವಮೊಗ್ಗ ಜಿಲ್ಲೆಯಲ್ಲೂ ಪರಿಷತ್ ಆಖಾಡ ಭರ್ಜರಿ ಸೆಣಸಾಟಕ್ಕೆ ಸಾಕ್ಷಿಯಾಗಿತ್ತು.
ಶಿವಮೊಗ್ಗ ವಿಧಾನಪರಿಷತ್ ಕ್ಷೇತ್ರದದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ಗೆ ಗೆಲುವು ಸಾಧಿಸಿದ್ದಾರೆ. ಅವರು, ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನ ಕುಮಾರ್ ವಿರುದ್ದ ಗೆಲುವು ಸಾಧಿಸಿದ್ದಾರೆ.
ಮತಗಳ ವಿವರ:
- ಡಿ.ಎಸ್. ಅರುಣ್ (ಬಿಜೆಪಿ) 2,197 ಮತಗಳು
- ಆರ್. ಪ್ರಸನ್ನ ಕುಮಾರ್ (ಕಾಂಗ್ರೆಸ್) 1,848 ಮತಗಳು.
ಧಾರವಾಡ ಜಿಲ್ಲೆ:
ಧಾರವಾಡ ದ್ವಿಸದಸ್ಯ ಪರಿಷತ್ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಫಲಿತಾಂಶವನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಹಂಚಿಕೊಂಡಿವೆ.
ಮತಗಳ ವಿವರ:
- ಸಲೀಂ ಅಹ್ಮದ್ (ಕಾಂಗ್ರೆಸ್) 3,334 ಮತಗಳು
- ಪ್ರದೀಪ್ ಶೆಟ್ಟರ್ (ಬಿಜೆಪಿ) 2,497 ಮತಗಳು
ಹಾಸನ ಜಿಲ್ಲೆ:
ಮಾಜಿ ಪ್ರಧಾನಿ ದೇವೇಗೌಡರ ತವರಿನಲ್ಲಿ ಅವರ ವಂಶದ ಕುಡಿ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ಈ ಮೂಲಕ ಅವರ ಕುಟುಂಬದ ಮತ್ತೊಬ್ಬ ಸದಸ್ಯ ಶಾಸನ ಸಭೆಗೆ ಪ್ರವೇಶ ಪಡೆದಿದ್ದಾರೆ.
ಹಾಸನ ವಿಧಾನಪರಿಷತ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದಾರೆ.
ಮತಗಳ ವಿವರ:
- ಸೂರಜ್ ರೇವಣ್ಣ (ಜೆಡಿಎಸ್) 2,281 ಮತಗಳು
- ಎಂ.ಶಂಕರ್ ಕಾಂಗ್ರೆಸ್ 748 ಮತಗಳು
ಮಂಡ್ಯ ಜಿಲ್ಲೆ:
ಮಂಡ್ಯ ಜಿಲ್ಲೆಯಿಂದಲೂ ಮೇಲ್ಮನೆ ಅಭ್ಯರ್ಥಿ ಗೆಲ್ಲುವ ಜೆಡಿಎಸ್ ಕನಸನ್ನು ಕಾಂಗ್ರೆಸ್ ನುಚ್ಚು ನೂರು ಮಾಡಿದೆ. ಈ ವಿಧಾನಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಜಿ.ದಿನೇಶ್ ಗೂಳಿಗೌಡ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ನ ಎನ್.ಅಪ್ಪಾಜಿಗೌಡ ಅವರು ಸೋಲೊಪ್ಪಿಕೊಂಡಿದ್ದಾರೆ.
ಮತಗಳ ವಿವರ:
- ಎಂ.ಜಿ.ದಿನೇಶ್ ಗೂಳಿಗೌಡ (ಕಾಂಗ್ರೆಸ್) 2,009 ಮತಗಳು
- ಎನ್.ಅಪ್ಪಾಜಿಗೌಡ (ಜೆಡಿಎಸ್) 1,912 ಮತಗಳು
- ಕೆ.ಆರ್.ಪೇಟೆ ಮಂಜು (ಬಿಜೆಪಿ) 50 ಮತಗಳು.
ತಮಕೂರು ಜಿಲ್ಲೆ:
ಕಲ್ಪತರು ನಾಡು ತಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸೂಲಿನ ಸೇಡು ತೀರಿಸಿಕೊಳ್ಳಲು ಜೆಡಿಎಸ್ ವಿಫಲವಾಗಿದೆ. ಸಂಸತ್ ಚುನಾವಣೆಯಲ್ಲಿ ದೇವೇಗೌಡರ ಸೋಲಿಗೆ ಕಾರಣವಾಗಿದ್ದ ರಾಜಣ್ಣ ಕುಟುಂಬವನ್ನು ಈ ಬಾರಿ ಪರಿಷತ್ ಚುನಾವಣೆಯಲ್ಲಿ ಸೋಲಿಸುವ ಮೂಲಕ ಸೇಡು ತೀರಿಸಲು ಜೆಡಿಎಸ್ ನಾಯಕರು ಶತ ಪ್ರಯತ್ನ ನಡೆಸಿದ್ದರು. ಆದರೆ ಫಲಿತಾಂಶ ಕಾಂಗ್ರೆಸ್ ಪರ ಬಂದಿದೆ.
ತುಮಕೂರು ವಿಧಾನಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ರಾಜಣ್ಣ ಅವರು ಬಿಜೆಪಿಯ ಎಮ್.ಎನ್. ಲೋಕೇಶ್ಗೌಡ ಹಾಗೂ ಜೆಡಿಎಸ್ನ ಆರ್.ಅನಿಲ್ಕುಮಾರ್ ವಿರುದ್ದ ಗೆಲುವು ಸಾಧಿಸಿದ್ದಾರೆ.
ಮತಗಳ ವಿವರ:
- ರಾಜೇಂದ್ರ ರಾಜಣ್ಣ (ಕಾಂಗ್ರೆಸ್) 3,135 ಮತಗಳು,
- ಎಮ್.ಎನ್. ಲೋಕೇಶ್ಗೌಡ (ಬಿಜೆಪಿ) 2,050 ಮತಗಳು
- ಆರ್.ಅನಿಲ್ಕುಮಾರ್ (ಜೆಡಿಎಸ್) 1,298 ಮತಗಳು..
ದಕ್ಷಿಣಕನ್ನಡ-ಉಡುಪಿ ಜಿಲ್ಲೆ:
ಈ ಬಾರಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ, ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಕರಾವಳಿಯ ಎರಡು ಸ್ಥಾನಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಹಂಚಿಕೊಂಡಿದೆ.
ಬಿಜೆಪಿಯಿಂದ ಕಣಕ್ಕಿಳಿದಿದ್ದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಪುನರಾಯ್ಕೆಯಾಗಿದ್ದಾರೆ.
ಈ ಚುನಾವಣೆ ಕಾಂಗ್ರೆಸ್ ನಾಯಕ ಮಂಜುನಾಥ್ ಭಂಡಾರಿ ಅವರ ರಾಜಕೀಯ ಕನಸನ್ನೂ ನನಸಾಗಿಸಿದೆ. ದ್ವಿ ಸದಸ್ಯ ಕ್ಷೇತ್ರವಾದ ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಕಾಂಗ್ರೆಸ್ ನಾಯಕ ಮಂಜುನಾಥ್ ಭಂಡಾರಿ ಅವರು ಗೆದ್ದು ಬೀಗಿದ್ದಾರೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಅವರಿಗೆ ಜಯ ಲಭಿಸಿದೆ.
ಮತಗಳ ವಿವರ:
- ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ) 3,672 ಮತಗಳು
- ಮಂಜುನಾಥ ಭಂಡಾರಿ (ಕಾಂಗ್ರೆಸ್) 2,079 ಮತಗಳು
ಚಿಕ್ಕಮಗಳೂರು ಜಿಲ್ಲೆ:
ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಅಖಾಡವೆನಿಸಿದ್ದ
ಚಿಕ್ಕಮಗಳೂರು, ವಿಧಾನಪರಿಷತ್ ಕ್ಷೇತ್ರದಲ್ಲಿ ಕಮಲ ಅಭ್ಯರ್ಥಿ ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ವಿರುದ್ದ ಕೇವಲ 6 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಮತಗಳ ವಿವರ:
- ಎಂ.ಕೆ.ಪ್ರಾಣೇಶ್ (ಬಿಜೆಪಿ) 1188 ಮತಗಳು
- ಗಾಯತ್ರಿ ಶಾಂತೇಗೌಡ (ಕಾಂಗ್ರೆಸ್) 1182 ಮತಗಳು .
ಕೊಡಗು ಜಿಲ್ಲೆ:
ಕೊಡಗು ಜಿಲ್ಲೆಯಿಂದ ವಿಧಾನಪರಿಷತ್ನ ಒಂದು ಸ್ಥಾನಕ್ಕೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರು ಕಾಂಗ್ರೆಸ್ನ ಡಾ. ಮಂಥರಗೌಡ ವಿರುದ್ದ ಗೆಲುವು ಸಾಧಿಸಿದ್ದಾರೆ.
ಮತಗಳ ವಿವರ :
- ಸುಜಾ ಕುಶಾಲಪ್ಪ (ಬಿಜೆಪಿ) 705 ಮತಗಳು
- ಡಾ. ಮಂಥರಗೌಡ (ಕಾಂಗ್ರೆಸ್) 632 ಮತಗಳು
ಕಲಬುರಗಿ ಜಿಲ್ಲೆ:
ಕಲಬುರಗಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ಗೆ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ವಿರುದ್ದ ಗೆಲುವು ಸಿಕ್ಕಿದೆ.
ಮತಗಳ ವಿವರ:
- ಬಿ.ಜಿ. ಪಾಟೀಲ್ (ಬಿಜೆಪಿ) 3,452 ಮತಗಳು
- ಶಿವಾನಂದ ಪಾಟೀಲ್ (ಕಾಂಗ್ರೆಸ್) 3,303 ಮತಗಳು.
ಚಿತ್ರದುರ್ಗ ಜಿಲ್ಲೆ
ಚಿತ್ರದುರ್ಗ ಜಿಲ್ಲೆಯ ವಿಧಾನಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ಗೆ ಗೆಲುವು ಸಿಕ್ಕಿದೆ. ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ಗೆ ಅವರು ಕಾಂಗ್ರೆಸ್ ಅಭ್ಯರ್ಥಿ ಬಿ.ಸೋಮಶೇಖರ್ ವಿರುದ್ದ ಗೆಲುವಿನ ನಗೆ ಬೀರಿದ್ದಾರೆ.
ಮತಗಳ ವಿವರ:
- ಕೆ.ಎಸ್.ನವೀನ್ (ಬಿಜೆಪಿ) 2,629 ಮತಗಳು
- ಬಿ.ಸೋಮಶೇಖರ್ (ಕಾಂಗ್ರೆಸ್) 2,271 ಮತಗಳು
ಬಳ್ಳಾರಿ ಜಿಲ್ಲೆ:
ಗಣಿಧಣಿಗಳ ನಾಡು ಬಳ್ಳಾರಿಯಲ್ಲೂ ವಿಧಾನಪರಿಷತ್ ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್ ಅವರು ಕಾಂಗ್ರೆಸ್ನ ಪ್ರಭಾವಿ ನಾಯಕ ಕೆ.ಸಿ.ಕೊಂಡಯ್ಯ ವಿರುದ್ದ ಜಯಭೇರಿ ಭಾರಿಸಿದ್ದಾರೆ.
ಮತಗಳ ವಿವರ:
- ವೈ.ಎಂ.ಸತೀಶ್ (ಬಿಜೆಪಿ) 2,659 ಮತಗಳು
- ಕೆ.ಸಿ.ಕೊಂಡಯ್ಯ (ಕಾಂಗ್ರೆಸ್) 1,902 ಮತಗಳು
ಉತ್ತರ ಕನ್ನಡ ಜಿಲ್ಲೆ:
ಉತ್ತರ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಮತಗಳ ವಿವರ:
- ಗಣಪತಿ ಉಳ್ವೇಕರ್ (ಬಿಜೆಪಿ) 1,514 ಮತಗಳು
- ಭೀಮಪ್ಪ ಟಿ.ನಾಯ್ಕ್ (ಕಾಂಗ್ರೆಸ್) 1,331 ಮತಗಳು
ಬೀದರ್ ಜಿಲ್ಲೆ:
ಬೀದರ್ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಸೋಲುಂಡಿದ್ದಾರೆ.
ಮತಗಳ ವಿವರ:
- ಭೀಮರಾವ್ ಪಾಟೀಲ್ (ಕಾಂಗ್ರೆಸ್) 1,789 ಮತಗಳು
- ಪ್ರಕಾಶ್ ಖಂಡ್ರೆ (ಬಿಜೆಪಿ) 1,562 ಮತಗಳು
ಕೋಲಾರ ಜಿಲ್ಲೆ:
ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ಹಿಡಿತ ಸಾಧಿಸಿದೆ. ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎಲ್.ಅನಿಲ್ ಕುಮಾರ್ಗೆ ಜೆಡಿಎಸ್ ಹುರಿಯಾಳು ವಿರುದ್ದ ಜಯ ಲಭಿಸಿದೆ.
ಮತಗಳ ವಿವರ:
- ಅನಿಲ್ ಕುಮಾರ್ (ಕಾಂಗ್ರೆಸ್) 2,280 ಮತಗಳು
- ವಕ್ಕಲೇರಿ ರಾಮು (ಜೆಡಿಎಸ್) 1,438 ಮತಗಳು
- ಡಾ.ಕೆ.ಎನ್.ವೇಣುಗೋಪಾಲ್ (ಬಿಜೆಪಿ) 1,682 ಮತಗಳು
ರಾಯಚೂರು ಜಿಲ್ಲೆ:
ರಾಯಚೂರು ವಿಧಾನಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ನ ಶರಣಗೌಡ ಪಾಟೀಲ್ ಬಯ್ಯಾಪುರ ಅವರಿಗೆ ಜಯ ಲಭಿಸಿದೆ.
ಮತಗಳ ವಿವರ:
- ಶರಣಗೌಡ ಪಾಟೀಲ್ ಬಯ್ಯಾಪುರ (ಕಾಂಗ್ರೆಸ್) 3,369 ಮತಗಳು
- ವಿಶ್ವನಾಥ್ ಎ.ಬನಹಟ್ಟಿ (ಬಿಜೆಪಿ) 2,941 ಮತಗಳು.