ಚಿತ್ರದುರ್ಗ:‘ ಕಳೆದೊಂದು ವರ್ಷದಿಂದ ಕೋವಿಡ್ ಸಮಯದಲ್ಲಿ ಪರಿಶಿಷ್ಟ ಜಾತಿ, ಪಂಗಡದವರು, ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಬಂದಿರುವ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಮಸ್ಯೆ ಆಲಿಸಿ ಅವರಿಗೆ ಧ್ವನಿಯಾಗಲು ಕಾಂಗ್ರೆಸ್ ಕಾರ್ಯಕ್ರಮ ರೂಪಿಸಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಅವರು ಶಿವಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗಕ್ಕೆ ತೆರಳುವ ಮಾರ್ಗದಲ್ಲಿ ಚಿತ್ರದುರ್ಗದ ಬಳಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಹಳ್ಳಿಗಾಡಿನಲ್ಲಿ ತಮ್ಮ ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಬರುತ್ತಿರುವವರು ಕಳೆದೊಂದು ವರ್ಷದಿಂದ ಕೊರೋನಾ ಸಮಯದಲ್ಲಿ ಬಹಳ ನೋವು ಅನುಭವಿಸಿದ್ದಾರೆ. ಅವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಉದ್ಯೋಗ, ವೃತ್ತಿ ಕಳೆದುಕೊಂಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಹಾಳಾಗಿದೆ. ಮುಂದೆ ಏನು ಮಾಡಬೇಕು? ಕೆಲಸಕ್ಕಾಗಿ ಹೊರಗೆ ಹೋದರೆ ಮರಳಿ ಮನೆಗೆ ಬಂದಾಗ ನೋಡುವ ರೀತಿ ಬೇರೆ – ಹೀಗೆ ಹತ್ತಾರು ಸಮಸ್ಯೆಗಳನ್ನು ಅವರು ನಮ್ಮ ಮುಂದಿಟ್ಟಿದ್ದಾರೆ. ಈ ಸಮುದಾಯದ ಎಲ್ಲ ಪಕ್ಷಗಳ ಮುಖಂಡರು ನಮ್ಮ ಬಳಿ ಬಂದು ಚರ್ಚೆ ಮಾಡಿದ್ದಾರೆ ಎಂದರು.
ನಾನು ಈಗಾಗಲೇ ಕರಾವಳಿ ಪ್ರದೇಶದ ಮೀನುಗಾರರ ಸಮಸ್ಯೆ ಆಲಿಸಿದ್ದೇನೆ. ಇನ್ನು ಲಂಬಾಣಿ ಸಮುದಾಯದವರ ತಾಂಡಾಗಳಿಗೆ ಭೇಟಿ ನೀಡಿ, ಅವರ ಪರಂಪರೆ, ಸಂಸ್ಕೃತಿ, ಶ್ರಮ ತಿಳಿದಿದ್ದೇನೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಭೇಟಿ ನೀಡಿ ಅವರ ಸಮಸ್ಯೆ ಹಾಗೂ ನೋವನ್ನು ನಾನೇ ನನ್ನ ಕಣ್ಣಾರೆ ಕಂಡು ಕಿವಿಯಾರೆ ಕೇಳಬೇಕು ಎಂದು ಹೊನ್ನಾಳಿ ತಾಲೂಕಿನಲ್ಲಿ ಸೇವಾಲಾಲ್ ಅವರ ಜನ್ಮ ಸ್ಥಳದಿಂದ ಪ್ರವಾಸ ಆರಂಭಿಸಿ ಶಿವಮೊಗ್ಗ, ಬಾಗಲಕೋಟೆ, ಬಿಜಾಪುರಕ್ಕೆ ಭೇಟಿ ನೀಡಲಿದ್ದೇನೆ. ನಾಳಿದ್ದು, ನೇಕಾರರನ್ನು ಭೇಟಿ ಮಾಡುತ್ತೇನೆ. ಅವರು ಕೂಡ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಅವರ ಸಮಸ್ಯೆ ಆಲಿಸುತ್ತೇನೆ. ಕೇವಲ ಶಿವಕುಮಾರ್ ಮಾತ್ರವಲ್ಲ ಇಡೀ ಕಾಙಗ್ರೆಸ್ ಪಕ್ಷ ಅವರ ಪರವಾಗಿ ಹೋರಾಡಲಿದೆ. ಇದು ಕೇವಲ ಕಾಂಗ್ರೆಸ್ ಕಾರ್ಯಕ್ರಮವಲ್ಲ. ನೊಂದ ಜನರಿಗೆ ಸಾಮೂಹಿಕವಾಗಿ ನಾವೆಲ್ಲ ಧ್ವನಿಯಾಗಿ ನಿಲ್ಲಲು, ಅವರಿಗೆ ಶಕ್ತಿ ತುಂಬಲು ಈ ಕಾರ್ಯಕ್ರಮ ರೂಪಿಸಿದ್ದೇವೆ ಎಂದವರು ತಿಳಿಸಿದರು.
ಇಂಧನ ದರ ಏರಿಕೆ ವಿರೋಧಿಸಿ ನಾವು 100 ನಾಟೌಟ್, ಸೈಕಲ್ ಜಾಥಾ, ಪ್ರತಿಭಟನೆ ಮಾಡಿದ್ದೇವೆ. ಆದರೆ ಬಿಜೆಪಿಯವರು ಭಂಡು ಬಿದ್ದಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಹಿರಿಯ ನಾಯಕರ ಸಭೆ ಕರೆದಿದ್ದೇನೆ. ಈ ವಿಚಾರವಾಗಿ ಏನು ಮಾಡಬೇಕೆಂದು ರಾಷ್ಟ್ರಮಟ್ಟದಲ್ಲೂ ಚರ್ಚೆಯಾಗುತ್ತಿದೆ ಎಂದವರು ತಿಳಿಸಿದರು.