ಬೆಂಗಳೂರು: ನನ್ನ ಸರ್ಕಾರ ಬಜೆಟ್ ಘೋಷಿತ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬ ಧೋರಣೆ ಸಹಿಸುವುದಿಲ್ಲ. ನೀವೆಲ್ಲರೂ ನನ್ನ (ರಡಾರ್) ಕಣ್ಗಾವಲಿನಲ್ಲಿ ಇದ್ದೀರಿ. ನಿಮ್ಮೆಲ್ಲರನ್ನು ನಾನು ಗಮನಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳ ಸಭೆಯಲ್ಲಿ ಸಿಇಒಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವೆಲ್ಲರೂ ಯುವಕರಿದ್ದೀರಿ. ಒಳ್ಳೆಯ ಕೆಲಸ ಮಾಡಲು ದೇವರು ನಿಮಗೆ ಇದೊಂದು ಅವಕಾಶ ನೀಡಿದ್ದಾನೆ. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಬಡವರ, ದೀನ ದಲಿತರ ಪರವಾದ ಕೆಲಸಗಳನ್ನು ಮಾಡಿ. ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣದಲ್ಲಿ ನಿಮ್ಮ ಕೊಡುಗೆಯನ್ನು ನೀಡಿ. ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡೋಣ. ನಾನು ನಿಮ್ಮ ಜೊತೆ ಇದ್ದೇನೆ. ಆದರೆ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮತ್ತು ಭ್ರಷ್ಟಾಚಾರವನ್ನು ಎಂದೂ ಸಹಿಸುವುದಿಲ್ಲ. ಅದಕ್ಕೆ ಅವಕಾಶವನ್ನೂ ಮಾಡಿಕೊಡುವುದಿಲ್ಲ. ಈ ಮಾತುಗಳನ್ನು ನೀವು ಸ್ಪಷ್ಟವಾಗಿ ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಪುನರ್ ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಶಾಲಾ ಮಕ್ಕಳಿಗೆ, ಮಹಿಳಾ ಸಬಲೀಕರಣ, ಸ್ತ್ರೀಶಕ್ತಿ ಸಂಘಗಳಿಗೆ ವಿಶೇಷ ಕಾರ್ಯಕ್ರಮ ಇವೆಲ್ಲ ಪ್ರಮುಖ ಕಾರ್ಯಕ್ರಮಗಳು. ಸಾರ್ವಜನಿಕರಿಗೆ ಒಳಿತು ಮಾಡುವ ನಿರ್ಧಾರಗಳನ್ನು ಧೈರ್ಯವಾಗಿ ತೆಗೆದುಕೊಳ್ಳಿ. ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಪುನರ್ ಸ್ಥಾಪಿಸೋಣ. ನಿಮ್ಮ ಕಾರ್ಯವೈಖರಿಯನ್ನು ಗಮನಿಸಲಾಗುತ್ತದೆ. ಸಾರ್ವಜನಿಕರು ತರುವ ಅರ್ಜಿಗಳಿಗೆ ಪರಿಹಾರ ಕೊಡುವ ಕೆಲಸವಾಗಬೇಕು. ನಿಮ್ಮ ಕಾರ್ಯದಲ್ಲಿ ನಿಖರತೆ ಇರಲಿ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸೂಚಿಸಿದರು.