ಬೆಂಗಳೂರು: ದೀನದಲಿತರ ಶ್ರೇಯೋಭಿವೃದ್ಧಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಣ್ಣೀರನ್ನು ಒರೆಸುವುದು ನನಗೆ ಮುಖ್ಯ. ಅವರು ಸ್ವಾಭಿಮಾನದ ಬದುಕು ನಡೆಸುವುದು ಬಹಳ ಮುಖ್ಯ. ಇದರಲ್ಲಿ ಯಾವುದೇ ರೀತಿಯ ರಾಜಿಯೂ ಇಲ್ಲ ಹಾಗೂ ಮುಲಾಜೂ ಇಲ್ಲ ಎಂದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಮಿತ್ರ ಸಹಾಯ ವಾಣಿ ಹಾಗೂ ಇಲಾಖೆಯ ಅಧಿಕಾರಿಗಳಿಗೆ ವೃತ್ತಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು, ರಾಜ್ಯದಲ್ಲಿ ಕಾನೂನುಗಳಿವೆ, ಆ ಪ್ರಕಾರ ನಡೆದುಕೊಳ್ಳಲು ಏನು ತೊಂದರೆ? ನೀವು ಸರಿಯಾಗಿ ಕೆಲಸ ಮಾಡಿದರೆ ಇಡೀ ಕರ್ನಾಟಕದ ದೀನದಲಿತರು ಸಂತೋಷ ಪಡುತ್ತಾರೆ. ಅವರ ಆಕಾಂಕ್ಷೆಗಳಿಗೆ ರೆಕ್ಕೆಪುಕ್ಕ ಬರುತ್ತವೆ. ಆ ಸಂಕಲ್ಪವನ್ನು ತೊಡಬೇಕು. ನೀವು ಕೇವಲ ನಿಮ್ಮ ಕೆಲಸ ಮಾಡುವುದಷ್ಟೇ ಅಲ್ಲ, ಅಧಿಕಾರವನ್ನು ಜನರ ಪರವಾಗಿ ಬಳಕೆ ಮಾಡುವ ಕರ್ತವ್ಯ ನಿಮ್ಮದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸಲು ಸಾಮರ್ಥ್ಯ ಮತ್ತು ಬದ್ಧತೆ ಅಗತ್ಯ. ಜನ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಬೇಕು ಹಾಗೂ ಅವನ ಜೀವನದ ಗುಣಮಟ್ಟವನ್ನು ಹೆಚ್ಚಿಸಬೇಕು ಎನ್ನುವ ಕಲ್ಪನೆ ಸಾಕಾರಗೊಳ್ಳಲು ಮೊದಲು ಇಲಾಖೆಗೆ ಸಾಮರ್ಥ್ಯ ಇರಬೇಕು. ಅದರ ಜೊತೆಗೆ ಬದ್ಧತೆ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆಡಳಿತದ ವ್ಯಾಖ್ಯಾನ ಬದಲಾಗಿದೆ. ಪ್ರಜಾಪ್ರಭುತ್ವದ ಆಕಾಂಕ್ಷೆಗಳು ಬದಲಾಗಿವೆ. ಬದಲಾವಣೆಯ ಈ ಪರ್ವ ಕಾಲದಲ್ಲಿ ನಾವೂ ಕೂಡ ಬದಲಾವಣೆಗೆ ಹೊಂದಿಕೊಂಡರೆ ಮಾತ್ರ ಪ್ರಸ್ತುತವಾಗುತ್ತೇವೆ. ಪ್ರಸ್ತುತವಾಗುವುದರ ಜೊತೆಗೆ ನಮ್ಮನ್ನು ನಂಬಿದ ಜನರಿಗೆ ನ್ಯಾಯವನ್ನು ಕೊಡಲು ಸಾಧ್ಯ. ಇದನ್ನು ನಾವು ಮಾಡದಿದ್ದರೆ, ಎಲ್ಲವೂ ಇದ್ದು ಇಲ್ಲದಂತಾಗುತ್ತದೆ. ಸರ್ಕಾರ ಪ್ರತಿ ವರ್ಷ ಅನುದಾನವನ್ನು ಕೊಡುತ್ತಿರುತ್ತದೆ. ಅದರ ಸದುಪಯೋಗವಾಗಬೇಕು. ಮತ್ತು ಸರಿಯಾದ ಸಮಯದಲ್ಲಿ ಆಗಬೇಕು. ಆಗ ಮಾತ್ರ ಕಾರ್ಯಕ್ರಮದ ಉದ್ದೇಶ ಈಡೇರುತ್ತದೆ. ವಿಶೇಷವಾಗಿ ಎಂದರು.
ಕಷ್ಟದಲ್ಲಿರುವವರಿಗೆ, ಬಡವರಿಗೆ, ಅವಮಾನಕ್ಕೆ ಒಳಗಾದವರಿಗೆ, ತುಳಿತಕ್ಕೆ ಒಳಗಾದವರಿಗೆ ಕೈ ಹಿಡಿದು ಮೇಲೆತ್ತುವ ಸೌಭಾಗ್ಯ ಒದಗಿದೆ ಇದನ್ನು ನಾನು ಪ್ರಾಮಾಣಿಕವಾಗಿ ಮಾಡಬೇಕು ಎನ್ನುವ ಬದ್ಧತೆ ಬಂದರೆ ಈ ಸಮಾಜ ಖಂಡಿತ ಉದ್ಧಾರವಾಗುತ್ತದೆ. ನೀವು ನಿಮ್ಮ ಕರ್ತವ್ಯ, ಸರ್ಕಾರದ ಧ್ಯೇಯೋದ್ದೇಶಗಳು ಹಾಗೂ ಕಟ್ಟ ಕಡೆಯ ಮನುಷ್ಯನ ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕು. ಟೀಕೆ ಟಿಪ್ಪಣಿಗಳು ಬಂದರೂ ಕರ್ತವ್ಯದಿಂದ ವಿಮುಖರಾಗಬಾರದು ಕರ್ತವ್ಯದಲ್ಲಿ ತಲ್ಲೀನರಾದವರಿಗೆ ಯಾವುದೂ ಬಾಧಕವಾಗುವುದಿಲ್ಲ. ಕರ್ತವ್ಯ ಮಾಡದೆ ಗತಿಸಿ ಹೋದ ಕಾಲ ಮರಳಿ ಬರುವುದಿಲ್ಲ ಅದರ ಬಗ್ಗೆ ಮಾತನಾಡುವುದರಿಂದ ಪ್ರಯೋಜನವಿಲ್ಲ. ಪ್ರಸ್ತುತವಾಗಿರುವ ನಮ್ಮ ಗುರಿ ಸಾಧನೆಯ ಛಲ ಮುಖ್ಯ. ವರ್ತಮಾನದಲ್ಲಿ ಮಾಡುವ ಕೆಲಸ ಭವಿಷ್ಯ ನಿರ್ಮಿಸುತ್ತದೆ. ಸಮಯಕ್ಕೆ ತಕ್ಕ ಹಾಗೆ ಕಾರ್ಯಕ್ರಮಗಳನ್ನು ಮುಟ್ಟಿಸಬೇಕು. ಸರಿಯಾದ ಮಾರ್ಗಸೂಚಿಗಳು ಇಲ್ಲದೆ ಕೆಲವು ಕಾರ್ಯಕ್ರಮಗಳು ಮುಟ್ಟುವುದಿಲ್ಲ ಎಂದರು.