ಬೆಂಗಳೂರು: ಚನ್ನಪಟ್ಟಣ ತಾಲೂಕಿನಲ್ಲಿ ನಡೆದ ಘಟನೆಯಿಂದ ತಮ್ಮ ಹಕ್ಕಿಗೆ ಚ್ಯುತಿಯಾಗಿದ್ದು, ಈ ಪ್ರಕರಣವನ್ನು ಹಕ್ಕು ಬಾಧ್ಯತಾ ಸಮಿತಿ ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಅವರು ಮುಖ್ಯಮಂತ್ರಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದು, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಅಡಿಯಲ್ಲಿ, ಅಕ್ಟೋಬರ್ 1ರಂದು ಆಯೋಜಿಸಿದ ಸರ್ಕಾರಿ ಕಾರ್ಯಕ್ರಮದಲ್ಲಿ ಸರ್ಕಾರ ನೀಡಿರುವ ಶಿಷ್ಟಾಚಾರ ಉಲ್ಲಂಘಿಸಿ ಮತ್ತು ಈ ಕ್ಷೇತ್ರ ಶಾಸಕನಾಗಿರುವ ನನ್ನನ್ನು ಕಡೆಗಣಿಸಿ, ನನ್ನ ಹಕ್ಕಿಗೆ ಚ್ಯುತಿ ಉಂಟು ಮಾಡಲಾಗಿದೆ ಎಂದು ದೂರಿದ್ದಾರೆ.
ಕ್ಷೇತ್ರದ ಜನತೆಯ ಆಶಯಕ್ಕೆ ವಿರುದ್ಧವಾಗಿ ಈ ಸರ್ಕಾರಿ ಕಾರ್ಯಕ್ರಮವನ್ನು ಏರ್ಪಡಿಸಿದ ಕಾರಣದಿಂದ ರಾಮನಗರ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲೆಯ ಮತ್ತು ಇತರೇ ಆಡಳಿತ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ವಿಧಾನಸಭಾ ಹಕ್ಕು ಭಾದ್ಯತೆ ಸಮಿತಿ ಪರಿಶೀಲನೆಗೆ ಈ ಪ್ರಕರಣವನ್ನು ಒಳಪಡಿಸಬೇಕು ಎಂದು ಆಗ್ರಹಪಡಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನಲ್ಲಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮತ್ತು ಕೆ.ಆರ್.ಐ.ಡಿ.ಎಲ್, ಇಲಾಖೆವತಿಯಿಂದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪೂಜಾ ಕಾರ್ಯಕ್ರಮವನ್ನು ಅಕ್ಟೋಬರ್ 1ರಂದು ಹಮ್ಮಿಕೊಂಡು ಆಹ್ವಾನ ಪತ್ರವನ್ನು ಮುದ್ರಿಸಲಾಗಿದೆ ಹಾಗೂ ಈ ಆಹ್ವಾನ ಪತ್ರಿಕೆಯ ಮುಖ ಪುಟದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಕೋರಿಕೆ ಮೇರೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ 50 ಕೋಟಿ ರೂ. ಅನುದಾನ ಅಡಿಯಲ್ಲಿ ಎಂದು ಸಹ ಮುದ್ರಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಆಹ್ವಾನ ಪತ್ರಿಕೆಯನ್ನು ಮುದ್ರಿಸುವ ಮುನ್ನ ಕಾರ್ಯಕ್ರಮದ ಬಗ್ಗೆ ಶಾಸಕನಾದ ನನ್ನೊಂದಿಗೆ ಚರ್ಚಿಸಿಲ್ಲ, ಇದು ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ನನ್ನ ಗಮನಕ್ಕೆ ತಂದು ಕಾರ್ಯಕ್ರಮವನ್ನು ಏರ್ಪಡಿಸಬೇಕಾಗಿತ್ತು. ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಅಥವಾ ಪ್ರಾರಂಭೋತ್ಸವ ನೆರವೇರಿಸುವಾಗ ಸಂಬಂಧಿಸಿದ ಯೋಜನೆಯ ನಾಮಾಂಕಿತ ಮತ್ತು ಸರ್ಕಾರದಿಂದ ನೀಡಿರುವ ಅನುದಾನವನ್ನು ಅಚ್ಚು ಹಾಕಬೇಕೇ ವಿನಾ ಬೇರೆ ಯಾವುದೇ ಚುನಾಯಿತ ಪ್ರತಿನಿಧಿಗಳು ಅನುದಾನ ತಂದಿದ್ದಾರೆಂದು ಬಿಂಬಿಸಿ, ಅಚ್ಚುಹಾಕುವುದು ಸರ್ಕಾರ ನೀತಿ, ನಿಯಮ ಮತ್ತು ಮಾರ್ಗದರ್ಶನಗಳಿಗೆ ವಿರುದ್ಧವಾಗಿರುತ್ತದೆ. ಸರ್ಕಾರ ನೀಡಿರುವ ಅನುದಾನ ಸರ್ಕಾರ ಬೊಕ್ಕಸದಿಂದ ಬಂದಿರುವ ಮೊತ್ತವೇ ಹೊರತು ಯಾವುದೇ ಚುನಾಯಿತ ಪ್ರತಿನಿಧಿಗಳು ನೀಡಿರುವ ಸ್ವಂತ ವಂತಿಕೆ ಅಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯರ ಕೋರಿಕೆಯಿಂದ ಬಂದಿರುವ ಅನುದಾನ ಎಂದು ಬಿಂಬಿಸಿ, ರಾಮನಗರ ಜಿಲ್ಲೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಚನ್ನಪಟ್ಟಣ ಮತ್ತು ಕೆ.ಆರ್.ಐ.ಡಿ.ಎಲ್. ಇಲಾಖೆ ಅಧಿಕಾರಿಗಳು, ಚನ್ನಪಟ್ಟಣ ಕ್ಷೇತ್ರದಿಂದ ಚುನಾಯಿತನಾಗಿರುವ ನನ್ನನ್ನು ಕಡೆಗಣಿಸಿದ್ದಾರೆ ಎಂದಿರುವ ಅವರು; ಇನ್ನು ನನ್ನ ಸ್ವ ಕ್ಷೇತ್ರದಲ್ಲಿ ನಡೆಯುವ ಸಭೆಯ ಬಗ್ಗೆ ನನ್ನ ಗಮನಕ್ಕೆ ಬಾರದೇ ಮತ್ತು ಸಭೆ ನಿಗದಿ ಪಡಿಸಿರುವ ದಿನಾಂಕದಂದು ನನ್ನ ಲಭ್ಯತೆ ಬಗ್ಗೆ ವಿಚಾರಿಸುವ ಸೌಜನ್ಯತೆಯನ್ನು ಜಿಲ್ಲಾಡಳತ ತೋರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ರಾಮನಗರ ಜಿಲ್ಲಾಧಿಕಾರಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳನ್ನು ವಿಚಾರಿಸಿದಾಗ ಸರ್ಕಾರದ ಮಾರ್ಗದರ್ಶನದಂತೆ, ಕಾರ್ಯಕ್ರಮ ಏರ್ಪಡಿಸಿರುವುದಾಗಿ ಉತ್ತರ ನೀಡಿರುತ್ತಾರೆ. ಶಾಸಕರ ಗಮನಕ್ಕೆ ತರದೇ ಸರ್ಕಾರಿ ಕಾರ್ಯಕ್ರಮ ಆಯೋಜಿಸಿದ ಹಿನ್ನೆಲೆಯಲ್ಲಿ ಇಡೀ ಕ್ಷೇತ್ರದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿ, ಈ ಸರ್ಕಾರಿ ಕಾರ್ಯಕ್ರಮವನ್ನು ರದ್ದು ಪಡಿಸುವಂತೆ ದಿನಾಂಕ: 30-09-2022ರಂದು ಆಗ್ರಹಿಸಿದ್ದಾರೆ. ಕ್ಷೇತ್ರದ ಜನರ ಭಾವನೆ ಅರಿತ ಕೆ.ಆರ್.ಐ.ಡಿ.ಎಲ್. ಅಧಿಕಾರಿಗಳು ಸೆಪ್ಟೆಂಬರ್ 30 ರಂದು ಈ ಕಾರ್ಯಕ್ರಮವನ್ನು ರದ್ದುಗೊಳಿಸಲು ರಾಮನಗರ ಜಿಲ್ಲಾಧಿಕಾರಿಗಳಿಗೆ ವಾಟ್ಸ್ ಆಪ್ ಮುಖೇನ ಸಂದೇಶ ಕಳುಹಿಸಿದ್ದಾರೆ. ಆದರೆ, ಈ ಜಿಲ್ಲಾಧಿಕಾರಿಗಳು ಈ ಬಗ್ಗೆ ಎಚ್ಚರ ವಹಿಸಿ ಕ್ರಮ ವಹಿಸುವ ಬದಲು ರಾಮನಗರ ಜಿಲ್ಲಾ ಪೊಲೀಸ್ ಸೂಪರಿಟೆಂಡೆಂಟ್ ಇವರು ನೀಡಿದ ಪೊಲೀಸ್ ಕುಮ್ಮಕ್ಕಿನಿಂದ ಈ ಸರ್ಕಾರಿ ಕಾರ್ಯಕ್ರಮವನ್ನು ಚನ್ನಪಟ್ಟಣ ತಾಲೂಕಿನಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಹೊಂದಿರುವ ವಿಧಾನ ಪರಿಷತ್ ಸದಸ್ಯರ ಹಸ್ತದಿಂದ ನೆರೆವೇರಿಸಲು ಬಿಟ್ಟಿದ್ದಾರೆ ಎಂದು ಹೆಚ್ ಡಿಕೆ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಈ ಕಾರ್ಯಕ್ರಮದ ವಿರುದ್ಧ ಜನರ ಆಕ್ರೋಶ ಅರಿತ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಉನ್ನತ ಶಿಕ್ಷಣ ಮತ್ತು ಐಟಿ ಮತ್ತು ಬಿಟಿ ಸಚಿವರು ಈ ಕಾರ್ಯಕ್ರಮದಿಂದ ಹೊರ ಉಳಿದಿದ್ದಾರೆ, ಚನ್ನಪಟ್ಟಣ ಕ್ಷೇತ್ರದ ಜನತೆಯ ಇಚ್ಛೆಗೆ ವಿರುದ್ಧವಾಗಿ ಈ ಸರ್ಕಾರಿ ಕಾರ್ಯಕ್ರಮ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕಾರ್ಯಕ್ರಮದ ವಿರುದ್ಧ ತಾಲೂಕಿನಾದ್ಯಂತ ವ್ಯಾಪಕವಾಗಿ ಪೊಲೀಸ್ ಕುಮ್ಮಕ್ಕುವಿನಲ್ಲಿ ನಡೆಯುವ ಕಾರ್ಯಕ್ರಮ ಎಂದು ಪ್ರತಿಭಟನೆ ನಡೆಸಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ, ಇಂತಹ ವ್ಯಾಪಕವಾದ ಪ್ರತಿಭಟನೆಯ ವಿಷಯ ರಾಮನಗರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠರಿಗೆ ಮೊದಲೇ ತಿಳಿದಿದ್ದರೂ ಮತ್ತು ಸ್ಥಳೀಯ ಚುನಾಯಿತ ವಿಧಾನಸಭಾ ಸದಸ್ಯ ಒಳಗೊಳ್ಳದ ಸರ್ಕಾರಿ ಕಾರ್ಯಕ್ರಮವು ಕ್ರಮಬದ್ಧವಲ್ಲವೆಂದು ಗೊತ್ತಿದ್ದರು, ಉದ್ದೇಶಪೂರ್ವಕವಾಗಿ ಮತ್ತು ಮೇಲಿನ ಅಧಿಕಾರಿಗಳ ಒತ್ತಡದ ಮೇರೆಗೆ ಈ ಸರ್ಕಾರಿ ಕಾರ್ಯಕ್ರಮವನ್ನು ಆಯೋಜಿಸಿ, ನಡೆಸಲು ಶಾಮೀಲಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ದೂರಿದ್ದಾರೆ.
ಮುಖ್ಯಮಂತ್ರಿಯವರೇ, ತಾವು ಚನ್ನಪಟ್ಟಣ ತಾಲೂಕಿನಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಾಮಕರಣಗೊಂಡಿರುವ ವಿಧಾನ ಪರಿಷತ್ ಸದಸ್ಯರಿಗೆ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅನುದಾನ 50 ಕೋಟಿ ರೂ.ಗಳನ್ನು ಅನುದಾನವಾಗಿ ನೀಡಿದ್ದೀರಿ ಮತ್ತು ಈ ಅನುದಾನದ ಅಡಿಯಲ್ಲಿ ಕೈಗೊಳ್ಳುವ ಕಾಮಗಾರಿಗಳನ್ನು ಕೆ.ಆರ್,ಐ,ಡಿ,ಎಲ್, ಮುಖೇನ ಕೈಗೊಳ್ಳುವಂತೆ ಆದೇಶಿಸಿದ್ದೀರಿ, ಕರ್ನಾಟಕ ವಿಧಾನ ಪರಿಷತ್ತಿನಲ್ಲಿ, 75 ವಿಧಾನ ಪರಿಷತ್ ಸದಸ್ಯರು ಇದ್ದರೂ, ಯಾರಿಗೂ ಈ ರೀತಿಯಾದ 50 ಕೋಟಿ ರೂ. ಅನುದಾನವನ್ನು ನೀಡದೇ, ಚನ್ನಪಟ್ಟಣ ತಾಲೂಕಿನಿಂದ ನಾಮನಿರ್ದೇಶನ ಹೊಂದಿರುವ ವಿಧಾನ ಪರಿಷತ್ ಸದಸ್ಯರಿಗೆ ನೀಡಲು ಇರುವ ವಿಶೇಷತೆಯ ಹಿನ್ನೆಲೆ ಏನು ಎನ್ನುವುದು ನನಗೆ ಅರಿವಾಗುತ್ತಿಲ್ಲ. ಬೃಹತ್ ಮೊತ್ತದ 50 ಕೋಟಿ ರೂ.ಗಳು ಅನುದಾನದ ಕಾಮಗಾರಿಗಳನ್ನು ಕೆಟಿಪಿಪಿ ಕಾಯಿದೆಯ ನಿಬಂಧನೆಗಳನ್ನು ಹೊರತುಪಡಿಸಿ, ಕೆ.ಆರ್.ಐ.ಡಿ.ಎಲ್. ನಿಂದ ಕೈಗೊಳ್ಳಲು ನೀಡಿರುವ ಆದೇಶದ ಉದ್ದೇಶವೇನು ? ಈಗಾಗಲೇ, ರಾಜ್ಯಾದ್ಯಂತ ಕೆ.ಆರ್.ಐ.ಡಿ.ಎಲ್. ನಿಂದ ವಿವಿಧ ಇಲಾಖೆ ಅಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಅನುಷ್ಠಾನದಲ್ಲಿ ಕಳಪೆ ಕಾಮಗಾರಿ, ವಿಳಂಬ ಮತ್ತು ಟೆಂಡರ್ ಪ್ರಕ್ರಿಯೆ ಮುಖೇನ ಕೈಗೊಳ್ಳುವ ಕಾಮಗಾರಿಗಳಗಿಂತ ಅಧಿಕ ಎನ್ನುವುದು ಪ್ರತಿ ಜಿಲ್ಲೆಯಲ್ಲಿ ತ್ರೈಮಾಸಿಕವಾಗಿ ಜಿಲ್ಲಾ ಉಸ್ತುವಾರಿ ಸಭೆಯಲ್ಲಿ ನಡೆಯುವ ಕೆ.ಡಿ.ಪಿ. ಸಭೆಯಲಿ ಚರ್ಚೆಯಾಗುತ್ತಿದೆ. ಇಂತಹ ಹಿನ್ನೆಲೆಯಲ್ಲಿ ತಾವು ರೂ.5೦ ಕೋಟಿ ಅನುದಾನದ ಕಾಮಗಾರಿಗಳನ್ನು ಕೆ.ಆರ್.ಐ.ಡಿ.ಎಲ್. ನಿಂದ ಕೈಗೊಳ್ಳಲು ಆದೇಶಿಸಿರುವುದು ಔಚಿತ್ಯವೇನು ? ಈ ಬಗ್ಗೆ ಕೂಲಂಕುಷವಾದ ತನಿಖೆಯ ಅವಶ್ಯವಿದೆ ‘ ಎಂದು ಹೇಳಿದ್ದಾರೆ.
ಚನ್ನಪಟ್ಟಣ ತಾಲೂಕಿನಿಂದ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಹೊಂದಿರುವ ಸದಸ್ಯರಿಗೆ ನೀಡಿರುವ 50 ಕೋಟಿ ರೂ. ವಿಶೇಷ ಅನುದಾನವನ್ನು ಉಳಿದ 74 ವಿಧಾನ ಪರಿಷತ್ ಸದಸ್ಯರಿಗೂ ನೀಡಿ, ಅವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಅನುವು ಮಾಡಿಕೊಡಬೇಕೆಂದು’ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಚುನಾಯಿತ ಪ್ರತಿನಿಧಿಗಳು ಶಾಸಕರು ಮತ್ತು ಲೋಕಸಭಾ ಸದಸ್ಯರುಗಳಿಗೆ ಸರ್ಕಾರಿ ಸಭೆ-ಸಮಾರಂಭಗಳಿಗೆ ಆಹ್ವಾನಿಸುವ ಕುರಿತು ಹೊರಡಿಸಿರುವ ಶಿಷ್ಟಾಚಾರ ಪಾಲನೆಗೆ ವಿರುದ್ಧವಾಗಿ ಸರ್ಕಾರಿ ಸಮಾರಂಭಗಳನ್ನು ಏರ್ಪಡಿಸಿ, ನನ್ನನ್ನು ಕಡೆಗಣಿಸಿ, ಸರ್ಕಾರಿ ಕಾರ್ಯಕ್ರಮ ನಡೆಸಿ, ನನ್ನ ಹಕ್ಕುಗಳಿಗೆ ಚ್ಯುತಿ ಉಂಟುಮಾಡಿರುವ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ನಿರ್ವಹಣಾಧಿಕಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳ ಹಾಗೂ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳನ್ನು ಕೂಡಲೇ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ, ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಹುದ್ದೆಯ ಅಧಿಕಾರಿಯೊಬ್ಬರಿಂದ ಸಮಗ್ರ ತನಿಖೆ ನಡೆಸಬೇಕೆಂದು ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.
ಒಂದು ವೇಳೆ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ವಹಿಸದಿದ್ದರೆ ನಮ್ಮ ಪಕ್ಷದ ವತಿಯಿಂದ ರಾಜಾದ್ಯಂತ ಉಗ್ರ ಹೋರಾಟ ನಡೆಸುವುದಲ್ಲದೆ, ನಮ್ಮ ಪಕ್ಷದ ಎಲ್ಲಾ ಶಾಸಕರು ಸೇರಿ ಗಾಂಧಿ ಪ್ರತಿಮೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ‘ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.


















































