ಚಿತ್ರದುರ್ಗ: ಕಾನೂನಿನಲ್ಲಿ ಗೊಂದಲ ಕಡಿಮೆಯಿದ್ದು. ಹೆಚ್ಚು ಸ್ಪಷ್ಟತೆ ಇರುವಂತೆ ಕಾನೂನು ರಚಿಸಬೇಕು. ಇದು ಕಾನೂನು ರೂಪಿಸುವವರ ಜವಾಬ್ದಾರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಜಿಲ್ಲಾ ನ್ಯಾಯಾಂಗ ಇಲಾಖೆ, ಚಿತ್ರದುರ್ಗ ಹಾಗೂ ವಕೀಲ ಸಂಘ (ರಿ) ಹೊಸದುರ್ಗ ವತಿಯಿಂದ ಆಯೋಜಿಸಿರುವ ಹೊಸದುರ್ಗ ನ್ಯಾಯಾಲಯದ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನ್ಯಾಯಾಲಯದ ತೀರ್ಪುಗಳ ಪ್ರಸ್ತುತತೆ ಬಗ್ಗೆ ಅರಿಯುವ ದೃಷ್ಟಿ ನ್ಯಾಯಾಧೀಶರು ಹಾಗೂ ವಕೀಲರಿಗೆ ಇರಬೇಕು. ಅಂತರರಾಜ್ಯ ಜಲವಿವಾದ ಕಾಯ್ದೆಯ ಕಲಂ 3 ರಂತೆ ಯಾವುದೇ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂದಾದಾಗ ಟ್ರಿಬ್ಯೂನಲ್ ರಚನೆಯಾಗುತ್ತದೆ. ಟ್ರಿಬ್ಯೂನಲ್ ರಚನೆಯ ನಂತರ ವಿವಾದ ಇತ್ಯರ್ಥಗೊಳ್ಳಲು ದಶಕಗಳೇ ಆಗುತ್ತವೆ. ಕರ್ನಾಟಕದಲ್ಲಿ 2-3 ದಶಕಗಳ ಅವಧಿಯ ಟ್ರಿಬ್ಯೂನಲ್ ಗಳು ಇವೆ. ಇಲ್ಲಿ ಜಲವಿವಾದಗಳಿಗೆ ಪರಿಹಾರ ದೊರೆಯದೇ ಕಗ್ಗಂಟಾಗಿ ಉಳಿಯುತ್ತದೆ. ಇದರಿಂದ ರಾಜ್ಯಗಳಿಗೆ ಜಲಸಂಪನ್ಮೂಲ ಪೋಲಾಗುತ್ತಿದೆ. ಈ ನಿಟ್ಟಿನಲ್ಲಿ ಬದಲಾವಣೆಗಳಿಗೆ ನಾವು ತೆರೆದುಕೊಳ್ಳದಿದ್ದರೆ ಸರ್ಕಾರ, ನ್ಯಾಯಮೂರ್ತಿಗಳು, ನ್ಯಾಯಾಂಗ ವ್ಯವಸ್ಥೆಗೂ ಕಷ್ಟವಾಗುತ್ತದೆ ಎಂದು ತಿಳಿಸಿದರು.
ನ್ಯಾಯ ಎನ್ನುವುದು ಸಮಾಜದಲ್ಲಿ ಕಷ್ಟದಿಂದ ಪಡೆಯುವ ಕೆಲಸವಾಗಬಾರದು. ಅದು ಸರಳವಾಗಿ ದೊರೆಯುವಂತಾಗಬೇಕು. ನೂತನ ತಂತ್ರಜ್ಞಾನದಿಂದ ಫಾಸ್ಟ್ ಟ್ರ್ಯಾಕ್ ಕೋರ್ಟ್, ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಆದರೆ ತಳಮಟ್ಟದಲ್ಲಿ ಕಕ್ಷಿದಾರನಿಗೆ ಕಾನೂನು ಮಾರ್ಗದರ್ಶನ ಹಾಗೂ ಸಹಕಾರ ಇನ್ನಷ್ಟು ಸಿಗುವ ಅವಶ್ಯಕತೆ ಇದೆ. ಈ ಹಿಂದೆ, ನ್ಯಾಯಸಮ್ಮತವಾದ ಸಮಾಜವಿದ್ದರೆ ನ್ಯಾಯಾಂಗ ವ್ಯವಸ್ಥೆ ಕಡಿಮೆಯಿದ್ದರೂ ನಡೆಯುತ್ತಿತ್ತು. ಆದರೆ ಈಗ ಅನ್ಯಾಯ ಮಾಡುವುದೇ ಸಹಜವೆಂಬಂತಹ ಪರಿಸ್ಥಿತಿ ಇರುವ ಕಾರಣ, ನ್ಯಾಯಾಂಗ ವ್ಯವಸ್ಥೆ ಮಧ್ಯೆ ಪ್ರವೇಶಿಸುವುದು ಅನಿವಾರ್ಯವಾಗಿದೆ ಎಂದರು
ಸಮಾಜದಲ್ಲಿ ವ್ಯಾಜ್ಯಗಳೂ ಜಾಸ್ತಿಯಾಗಿದ್ದು, ಜನರು ನ್ಯಾಯ ಪಡೆಯಲು ಹೆಚ್ಚು ಸಮಯ ವ್ಯಯಿಸುತ್ತಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಪ್ರಜಾಪ್ರಭುತ್ವದ ಪ್ರಮುಖ ಅಂಗ ನ್ಯಾಯಾಂಗ. ನಮ್ಮ ದೇಶದಲ್ಲಿನ ಸಾಮಾಜಿಕ ವ್ಯವಸ್ಥೆಯನ್ವಯ ನ್ಯಾಯ ಒದಿಸುವುದು ಸವಾಲಿನ ಕೆಲಸ. ಭಾರತದಲ್ಲಿ ಶ್ರೇಷ್ಟವಾದ ನ್ಯಾಯಾಂಗ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ಅಷ್ಟೇ ಮುಖ್ಯ. ಇಲ್ಲಿನ ನಿರಂತರ ಬದಲಾವಣೆ, ಸುಧಾರಣೆ ಅಗತ್ಯವಿದೆ ಎಂದರು.
ಹೊಸದುರ್ಗ ನ್ಯಾಯಾಲಯ ಐವತ್ತು ವರ್ಷದ ಸುದೀರ್ಘ ಅವಧಿಯಲ್ಲಿ ಹಲವಾರು ಜನರಿಗೆ ನ್ಯಾಯ ಸಿಕ್ಕಿದೆ. ನ್ಯಾಯ ಹಾಗೂ ಕಾನೂನಿನ ಅರಿವನ್ನು ಮೂಡಿಸಿದೆ. ಹತ್ತು ಹಲವಾರು ನ್ಯಾಯಾಧೀಶರನ್ನು ದೇಶಕ್ಕೆ ನೀಡಿದೆ. ಹೊಸದುರ್ಗ ನ್ಯಾಯಾಲಯ ಜನರಿಗೆ ನ್ಯಾಯ ಒದಗಿಸುತ್ತಾ ಶತಮಾನೋತ್ಸವ ಆಚರಿಸುವಂತಾಗಲಿ. ಈ ಸಮಾರಂಭಕ್ಕೆ ಆಗಮಿಸಿರುವ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ.ಎಸ್.ಭೋಪಣ್ಣ ಬಂದಿದ್ದಾರೆ. ತಾಲ್ಲೂಕು ಮಟ್ಟದ ನ್ಯಾಯಾಲಯಕ್ಕೆ ಸರ್ವೋಚ್ಚಮಟ್ಟದ ನ್ಯಾಯಾಧೀಶರು ಬಂದಿರುವುದು ಅಪರೂಪ. ಭೋಪಣ್ಣ ಅವರು ತಾಲ್ಲೂಕು ಮಟ್ಟದ ಜನರಿಗೆ ಸ್ಪೂರ್ತಿ ತುಂಬಲು , ಸರ್ವೋಚ್ಛ ನ್ಯಾಯಾಲಯವೂ ಕೂಡ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ನಿರೂಪಿಸಿದೆ. ತಾಲ್ಲೂಕು ಮಟ್ಟದ ನ್ಯಾಯಾಲಯಗಳಲ್ಲೇ ಹೆಚ್ಚು, ಬಡವರು, ರೈತರ ವ್ಯಾಜ್ಯಗಳು ಬರುತ್ತವೆ. ಕರ್ನಾಟಕದ ನೂತನ ಮುಖ್ಯನ್ಯಾಯಮೂರ್ತಿಗಳಾದ ಶ್ರೀ ಪ್ರಸನ್ನ ಬಿ.ವರ್ಲೇ ಆಗಮಿಸಿರುವುದು ಸಂತೋಷವೆನಿಸಿದೆ ಎಂದರು.






















































