ರಾಮನಗರ: ಗುತ್ತಿಗೆದಾರ ಸಂತೋಷ್ ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಪ್ರದೇಶ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇದೊಂದು ಭ್ರಷ್ಟ ಸರ್ಕಾರ. ದೂರಿನಲ್ಲಿ ಭ್ರಷ್ಟಾಚಾರ ಪ್ರಸ್ತಾಪ ಸ್ಪಷ್ಟವಾಗಿದೆ. ಹೀಗಾಗಿ ಆತ್ಮಹತ್ಯೆಗೆ ಕಾರಣದ ಜತೆಗೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಬಂಧಿಸಬೇಕು. ಬೆರೆಯವರಾಗಿದ್ದರೆ ಈ ಸರ್ಕಾರ ಸುಮ್ಮನೆ ಬಿಡುತ್ತಿತ್ತೆ? ನಾವು ಜನರಿಗೆ ಜಾಗೃತಿ ಮೂಡಿಸುವ ಹೋರಾಟ ಮಾಡುತ್ತೇವೆ’ ಎಂದಿದ್ದಾರೆ.
ಸಂತೋಷ್ ಪಾಟೀಲ್ ಸಹೋದರ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಸಂತೋಷ್ ಕುಟುಂಬದವರನ್ನು ನಾವು ಭೇಟಿ ಮಾಡಲು ಹೋದಾಗ ಅವರ ಪತ್ನಿ, ‘ನನ್ನ ಪತಿ ನನ್ಮ ಮಾಂಗಲ್ಯಸರ, ಚಿನ್ನಾಭರಣ ಒತ್ತೆ ಇಟ್ಟು ಕೆಲಸ ಮಾಡಿದ್ದಾರೆ. ದಿನಬೆಳಗಾದರೆ ಮೋದಿ, ಬಿಜೆಪಿ ಎನ್ನುತ್ತಿದ್ದರು. ಈಗ ಅವರೇ ಸಾವನ್ನಪ್ಪಿದ್ದಾರೆ’ ಎಂದು ಗೋಳಾಡಿದರು. ನಂತರ ನಾವು ಕಾಮಗಾರಿ ಬಿಲ್ ಪಾವತಿಸಬೇಕು ಎಂದು ಆಗ್ರಹಿಸಿದೆವು. ಆದರೆ ಅತೀಕ್ ಎಂಬ ಅಧಿಕಾರಿ ಮೂಲಕ ವರ್ಕ್ ಆರ್ಡರ್ ಆಗಿಲ್ಲ ಎಂದರು. ಆದರೆ ಸಚಿವ ಮುರುಗೇಶ್ ನಿರಾಣಿ, ಕಾರಜೋಳ ಅವರು ಕೆಲಸ ಆಗಿದೆ ಬಿಲ್ ಪಾವತಿ ಮಾಡಿಸುವುದಾಗಿ ಹೇಳಿದ್ದಾರೆ ಎಂದು ಡಿಕೆಶಿ ಹೇಳಿದರು.
ಇದೇ ವೇಳೆ, ಕುಮಾರಸ್ವಾಮಿ ಅವರ ನಡೆ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದ ಡಿಕೆಶಿ, ಕುಮಾರಸ್ವಾಮಿ ಅವರು ಗೋಹತ್ಯೆ, ಮತಾಂತರ ವಿಚಾರದಲ್ಲಿ ನಮ್ಮ ಪರ ಯಾಕೆ ನಿಲ್ಲಲಿಲ್ಲ? ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಪರ ನಿಂತಿರುವುದೇಕೆ? ಈಶ್ವರಪ್ಪ ರಾಜೀನಾಮೆ ನೀಡುವುದು ಬೇಡ ಎಂದಿದ್ದು ಯಾಕೆ? ಎಂದರು.
ನಮ್ಮಲ್ಲಿ ಯಾರಾದರೂ ಮುಸಲ್ಮಾನರು, ಕ್ರೈಸ್ತರು ಬಲವಂತದ ಮತಾಂತರ ಮಾಡುತ್ತಿದ್ದಾರಾ? ಆದರೂ ಅದರ ವಿರುದ್ಧ ಯಾಕೆ ಧ್ವನಿ ಎತ್ತಲಿಲ್ಲ? ಈ ರಾಜ್ಯದ ಜನರ ಜವಾಬ್ದಾರಿ ಮೇಲೆ ರಾಜಕಾರಣ ಮಾಡಿದರೆ ಮಾತ್ರ ನಾವು ರಾಜಕೀಯದಲ್ಲಿ ಬದುಕಲು ಸಾಧ್ಯ. ಆತ್ಮಸಾಕ್ಷಿಗೆ ವಿರುದ್ಧವಾಗಿ ನಾವು ಕೆಲಸ ಮಾಡಬಾರದು. ನೀವು ಒಳ್ಳೆ ಕೆಲಸ ಮಾಡಿ, ನಾನು ನಿಮಗೆ ಸಹಕಾರ ನೀಡುತ್ತೇವೆ. ಆದರೆ ದ್ವಂದ್ವ ನಿಲುವು ಬೇಡ ಎಂದರು.