ಕೋಲಾರ,ಸೆ.19; ಕೋಲಾರದ ಖ್ಯಾತ ಕೋಟಿಲಿಂಗೇಶ್ವರಸ್ವಾಮಿ ದೇವಾಲಯವನ್ನು ರಾಜ್ಯ ಸರ್ಕಾರ ವಶಕ್ಕೆ ತೆಗೆದುಕೊಂಡಿರುವುದಾಗಿ, ಕೆಜಿಎಫ್ ನ ಜಿಲ್ಲಾ 3ನೇ ಸತ್ರ ನ್ಯಾಯಾಲಯದ ಮಹತ್ವದ ಆದೇಶವನ್ನು ನೀಡಿದೆ. ಕೆಜಿಎಫ್ ತಾಲ್ಲೂಕಿನ ಕಮ್ಮಸಂದ್ರ ಗ್ರಾಮದಲ್ಲಿರುವ ಈ ದೇಗುಲವು ದಕ್ಷಿಣ ಭಾರತದ ಪ್ರಮುಖ ದೇಗುಲಗಳಲ್ಲಿ ಒಂದು. ಈ ದೇವಾಲಯದಲ್ಲಿ 108 ಅಡಿ ಎತ್ತರದ ಆಕರ್ಷಕ ಶೀವಲಿಂಗವಿದ್ದು, ಕೋಟ್ಯಂತರ ರೂಪಾಯಿ ಆಸ್ತಿ ಮತ್ತು ವಹಿವಾಟು ಹೊಂದಿರುವ ಈಶ್ವರನ ದೇಗುಲ ಇದಾಗಿದೆ.
ಇಲ್ಲಿನ ಸಾಂಬಶಿವಮೂರ್ತಿ ಸ್ವಾಮಿ ನಿಧನರಾದ ನಂತರ ದೇಗುಲ ಮತ್ತು ಆಸ್ತಿ ಹಕ್ಕಿಗಾಗಿ,ಆಡಳಿತಾಧಿಕಾರಿ ಪದವಿಗಾಗಿ ದೇಗುಲದ ಕಾರ್ಯದರ್ಶಿ ಕೆ.ವಿ.ಕುಮಾರಿ ಮತ್ತು ಸ್ವಾಮೀಜಿಯ ಪುತ್ರ ಡಾ.ಶಿವಪ್ರಸಾದ್ ಮದ್ಯೆ ಕಾನೂನು ಹೋರಾಟ ನಡೆಯುತ್ತಲೇ ಇದೆ. ಈ ಕಾರಣದಿಂದ ಶಾಂತಿ ಸುವ್ಯವಸ್ಥೆ ಕಾಪಾಡಲು ಸರ್ಕಾರದ ವಶಕ್ಕೆ ದೇಗುಲವನ್ನು ಒಪ್ಪಿಸಲು ಕೋರ್ಟ್ ಗುರುವಾರ ಆದೇಶ ನೀಡಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಮಿತಿ ರಚಿಸಬೇಕೆಂಬುದು ಕೋರ್ಟ್ ಆದೇಶದ ಸಾರವಾಗಿದೆ. ಆದರೆ ಕೋರ್ಟ್ನ ಈ ತೀರ್ಮಾನವು ದೇಗುಲದ ಲಕ್ಷಾಂತರ ಭಕ್ತಾದಿಗಳಲ್ಲಿ ಕುತೂಹಲ ಕೆರಳಿಸಿರುವುದಂತೂ ಸುಳ್ಳಲ್ಲ.