ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ವೇಗವಾಗಿ ಹಬ್ಬುತ್ತಿದ್ದು, ಸೋಂಕು ನಿಯಂತ್ರಣ ಸಂಬಂಧ ಸರ್ಕಾರ ಕಠಿಣ ನಿಯಮ ಘೋಷಿಸಿದೆ. ಪ್ರಮುಖವಾಗಿ ಬೆಂಗಳೂರಿನಲ್ಲಿ ಟಫ್ ರೂಲ್ಸ್ ಜಾರಿಯ ಘೋಷಣೆ ಮಾಡಿದೆ.
ರಾಜ್ಯದಲ್ಲೂ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ದೃಢಪಡುತ್ತಿದ್ದು, ಸೋಂಕು ನಿಯಂತ್ರಣ ಸಂಬಂಧ ಬೆಂಗಳೂರಿನಲ್ಲಿಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಆರ್.ಅಶೋಕ್, ಸುಧಾಕರ್, ಅಶ್ವತ್ಥ ನಾರಾಯಣ ಸಹಿತ ಪ್ರಮುಖ ಸಚಿವರು, ಅಧಿಕಾರಿಗಳು ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಮೂರು ತಾಸಿಗೂ ಹೆಚ್ಚು ಹೊತ್ತು ನಡೆದ ಸಭೆಯಲ್ಲಿ ಹಲವು ಕಠಿಣ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರಾದ ಆರ್.ಅಶೋಕ್ ಹಾಗೂ ಡಾ.ಸುಧಾಕರ್, ಬೆಂಗಳೂರಿನಲ್ಲಿ ಎರಡುವಾರ ಕಾಲ ಶಾಲೆಗಳಲ್ಲಿ ಆಫ್‌ಲೈನ್ ತರಗತಿ ಬಂದ್ ಮಾಡುವ ನಿರ್ಧಾರವನ್ನು ಪ್ರಕಟಿಸಿದರು. ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದೆಲ್ಲ ಕಡೆ ಆಫ್‌ಲೈನ್ ತರಗತಿ ರದ್ದುಗೊಳಿಸಲಾಗುತ್ತದೆ. ಶಾಲಾ ಕಾಲೇಜುಗಳು ಆನ್ಲೈನ್ ವಿಧಾನದಲ್ಲಿ ನಡೆಯುತ್ತದೆ ಎಂದರು.
ಇದೇ ವೇಳೆ ರಾಜ್ಯಾದ್ಯಂತ ಜ.6ರಿಂದ ಜಾರಿಯಾಗುವಂತೆ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ವೀಕೆಂಟ್ ಕರ್ಫ್ಯೂ ಇರಲಿದೆ. ಆಹಾರ ವಸ್ತು, ಹೊಟೆಲ್ಗಳಲ್ಲಿ ಪಾರ್ಸೆಲ್, ಅತ್ಯಗತ್ಯ ಸೇವೆಗಳು ಮಾತ್ರ ಇರುತ್ತವೆ ಎಂದು ತಿಳಿಸಿದರು.