ಬೆಂಗಳೂರು: ಕೈಗಾರಿಗಳಿಗೆ ಉತ್ತೇಜನ ನೀಡಲು ಮಂಜೂರಾದ ಭೂಮಿಯ ಕ್ರಯಪತ್ರವನ್ನು ಕೈಗಾರಿಕೆಗಳು ಆರಂಭವಾದ 10ರಿಂದ 15 ದಿನಗಳ ಒಳಗೆ ಕೊಡಲು ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ‘ಹೊಸ ನೀತಿ’ ರೂಪಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಪ್ರಕಟಿಸಿದ್ದಾರೆ.
ಗುರುವಾರ ಖಾಸಗಿ ಹೊಟೇಲ್ ನಲ್ಲಿ ಇಂಡೋ-ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ‘ಕರ್ನಾಟಕದಲ್ಲಿ ಉತ್ಪಾದನೆ’ ಕುರಿತ ದುಂಡು ಮೇಜಿನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕಾ ಯೋಜನೆಗಳು ವಿಳಂಬವಾಗುವುದನ್ನು ತಪ್ಪಿಸಲು ಉತ್ಪಾದನಾ ಕೈಗಾರಿಕೆಗಳು ತಮ್ಮ ಘಟಕಗಳನ್ನು ಸ್ಥಾಪಿಸಲು ಪ್ರಾರಂಭಿಸಿದ 10 ರಿಂದ 15 ದಿನಗಳಲ್ಲಿ ತಮಗೆ ಮಂಜೂರು ಮಾಡಿದ ಭೂಮಿಯ ಕ್ರಯ ಪತ್ರವನ್ನು ಪಡೆಯಲು
ಅನುಕೂಲ ಮಾಡಿಕೊಡುವ ನೀತಿಯನ್ನು ಶೀಘ್ರದಲ್ಲೇ ಜಾರಿ ಮಾಡಲಿದ್ದೇವೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಕೈಗಾರಿಕಾ ಯೋಜನೆಗಳನ್ನು ಪ್ರಾರಂಭಿಸುವಲ್ಲಿ ವಿಳಂಬವನ್ನು ತಪ್ಪಿಸುವುದರ ಜೊತೆಗೆ ಪ್ರಕ್ರಿಯೆಯನ್ನು ವೇಗಗೊಳಿಸಲು ಹೆಚ್ಚಿನ
ಅನುಕೂಲವಾಗಲಿದೆ. ಇದರಿಂದಾಗಿ ಉದ್ಯಮಿಗಳು ದೊಡ್ಡ ಪ್ರಮಾಣದಲ್ಲಿ ಹೂಡಿಕೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಅಭಿವೃದ್ಧಿಪಡಿಸಿದ ಜಮೀನನ್ನು ಮಾರುಕಟ್ಟೆಯ ಬೆಲೆ ಶೇ.15ರಿಂದ 20ಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ಹೊಸ ನಿಯಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದು ಸರ್ಕಾರದ ಗುರಿಯಾಗಿದೆ.ದೇಶದಲ್ಲೇ ”ರಾಜ್ಯವು ಅತ್ಯುತ್ತಮ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಪ್ರಮುಖ ಉತ್ಪಾದನಾ ಕೈಗಾರಿಕೆಗಳಿಗೆ ನೆಲೆಯಾಗಿದೆ”ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ವರ್ಷ 2022 ರ ನವೆಂಬರ್ ತಿಂಗಳಲ್ಲಿ
ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯದಲ್ಲಿ ಸುಮಾರು ₹ 10 ಲಕ್ಷ ಕೋಟಿ ಹೂಡಿಕೆಯ ಗುರಿ ಹೊಂದಿದ್ದೇವೆ ಎಂದು ಹೇಳಿದರು.
“ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ
ಪರಸ್ಪರ ಒಪ್ಪಂದ ಮತ್ತು ಹೂಡಿಕೆ ಪ್ರಸ್ತಾಪಗಳ ರೂಪದಲ್ಲಿ 28,600 ಕೋಟಿ ರೂಪಾಯಿ ಮೌಲ್ಯದ ಹೂಡಿಕೆಗಳನ್ನು ಗಳಿಸಿದೆ. ವ್ಯಾಪಾರ ವಹಿವಾಟಿಗಳನ್ನು ಸರಳೀಕರಣಗೊಳಿಸಲು
ನಾವು ಲಾಜಿಸ್ಟಿಕ್ಸ್ ಮತ್ತು ವೇರ್ ಸಿಂಗ್ ಕ್ಷೇತ್ರಗಳಿಗೆ ಉದ್ಯಮದ ಸ್ಥಾನಮಾನವನ್ನು ನೀಡಿದ್ದೇವೆ ಎಂದು
ತಿಳಿಸಿದರು.
ಕರ್ನಾಟಕವು ಅನೇಕ ಜಾಗತಿಕ ಕಂಪನಿಗಳ ತಾಣವಾಗಿದೆ. ರಾಜ್ಯವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಸದುದ್ದೇಶದಿಂದ ಇಂತಹ ಸಂವಾದ ಹಾಗೂ ಚರ್ಚೆಗೆ ವೇದಿಕೆ ಸೃಷ್ಟಿಸಿದ್ದಕ್ಕಾಗಿ ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ನ ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಸಚಿವ
ನಿರಾಣಿ ಅವರು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಇಂಡೋ – ಅಮೇರಿಕನ್ ಚೇಂಬರ್ಸ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಶ ಜೋಸ್ ಜಾಕೋಬ್ ಐಎಸಿಸಿ ಶಾಖೆಯ ಮುಖ್ಯಸ್ಥರಾದ ಜಿತಿಕಾ ನಾರಂಗ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ,ಗುಂಜನ್ ಕೃಷ್ಣ, ಐಎಸಿಸಿ ಹಿರಿಯ ಉಪಾಧ್ಯಕ್ಷ ಚಂದ್ರಕನಾಥ್ ಬಿ ಎನ್, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.