ಹಾವೇರಿ: ಭಾಜಪ ಇಡೀ ಕರ್ನಾಟಕದಲ್ಲಿ ಅತ್ಯಂತ ಆಳವಾಗಿ ಬೇರೂರಿರುವ ಪಕ್ಷ. ಕಾಂಗ್ರೆಸ್ ತಿಪ್ಪರಲಾಗ ಹಾಕಿದರೂ ಭಾಜಪದ ಸಣ್ಣ ಎಲೆಯನ್ನೂ, ನಮ್ಮ ಗಟ್ಟಿ ಬೇರುಗಳನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಿರೇಕೆರೂರು ತಾಲ್ಲೂಕಿನಲ್ಲಿ ಭಾಜಪ ವತಿಯಿಂದ ಏರ್ಪಡಿಸಿದ್ದ ಜನಸಂಕಲ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ. ಬೂತಿನಿಂದ ಹಿಡಿದು ರಾಜ್ಯ ಮಟ್ಟದವರೆಗೂ ಸಂಘಟಿತವಾಗಿರುವ ಪಕ್ಷ. ಭಾಜಪಕ್ಕೆ ವಿಶ್ವಮಾನ್ಯ ನಾಯಕ ನರೇಂದ್ರ ಮೋದಿಯವರ ನಾಯಕತ್ವವಿದೆ. ಭಾಜಪದ ಡಬಲ್ ಇಂಜಿನ್ ಸರ್ಕಾರವಿದೆ. ಯು.ಬಿ.ಬಣಕಾರ್ ಕಾಂಗ್ರೆಸ್ ಸೇರಿದ್ದಾರೆ. ಅವರ ಸಮಯ ಸರಿಯಿಲ್ಲ. ಯಡಿಯೂರಪ್ಪ ನವರು ರಾಜಕೀಯ ಬೆಂಬಲ ನೀಡಿದವರು. ಅಧಿಕಾರವಿಲ್ಲದಾಗಲೂ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಸಚಿವ ಸಂಪುಟದ ಸ್ಥಾನ ನೀಡಿ ಗೌರವ ನೀಡಿದ್ದರು. ಭಾಜಪದಿಂದ ಇದೆಲ್ಲವನ್ನೂ ಮಾಡಲು ಸಾಧ್ಯವಾಗಿದೆ. ಆದರೆ ಯಾವ ಪಕ್ಷ ಅವರಿಗೆ ಸ್ಥಾನಮಾನ ಕೊಟ್ಟಿತ್ತೋ, ಆ ಪಕ್ಷವನ್ನು ಬಿಟ್ಟು, ಯಾವ ಪಕ್ಷವನ್ನು ನಿರಂತರವಾಗಿ ವಿರೋಧ ಮಾಡಿಕೊಂಡು ಬಂದಿದ್ದರೋ ಅದೇ ಪಕ್ಷವನ್ನು ಸೇರಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಆದರೆ ಜನ ಈ ಬಗ್ಗೆ ತೀರ್ಮಾನ ಮಾಡಲಿ. ರಾಜಕಾರಣ ಎಂದರೆ ಅಭಿವೃದ್ಧಿ. ಬಿ.ಸಿ.ಪಾಟೀಲರು ಮೊದಲು ಬಾರಿಗೆ ಆಯ್ಕೆಯಾಗಿ ಬಂದಾಗ ಶಪಥ ತೊಟ್ಟಂತೆ ಅಭಿವೃದ್ಧಿ ಮಾಡಿದ್ದಾರೆ. ಅವರು ಶಾಸಕರು ಅಥವಾ ಮಂತ್ರಿಗಳಾದಾಗ ಈ ಕ್ಷೇತ್ರ ಅಭಿವೃದ್ಧಿಯಾಗುತ್ತದೆ ಎಂದರು.
ಈ ಸಂಕಲ್ಪ ಯಾತ್ರೆ 2023 ರ ಚುನಾವಣೆಯ ವಿಜಯ ಸಂಕಲ್ಪ ಯಾತ್ರೆ. ಸಚಿವ ಬಿ.ಸಿ.ಪಾಟೀಲರು ಶಾಸಕರಿದ್ದಾಗ ಈ ತಾಲ್ಲೂಕಿನ ಅಭಿವೃದ್ಧಿ ಹೇಗಿತ್ತು. ಅವರು ಇಲ್ಲದಿದ್ದಾಗ ಅಭಿವೃದ್ಧಿ ಹೇಗಿದೆ ಎಂದು ಯೋಚಿಸಿದರೆ ಈ ತಾಲ್ಲೂಕಿನ ಅಭಿವೃದ್ಧಿಯಲ್ಲಿ ಸಿಂಹಪಾಲು ಬಿ.ಸಿ.ಪಾಟೀಲರದ್ದು. ಅವರಿಗೆ ರೈತರ ಮೇಲೆ ಅಪಾರವಾದ ಪ್ರೀತಿ ವಿಶ್ವಾಸವಿದೆ. ಅವರು ವಿರೋಧಪಕ್ಷದಲ್ಲಿ ಇದ್ದಾಗ ರೈತರ ಪರವಾಗಿ ಹೋರಾಟ ಮಾಡಿ ರೈತರಿಗೆ ನ್ಯಾಯಸಮ್ಮತವಾದ ಪರಿಹಾರ ದೊರಕಿಸಲು ಒಂದು ತಿಂಗಳು ಬೆಳಗಾವಿ ಜೈಲಿನಲ್ಲಿದ್ದರು. ಅವರೊಂದಿಗೆ ಜೈಲಿಗೆ ಹೋದವರ ಮನೆ ಮನೆಗೆ ತೆರಳಿ ಆತ್ಮಸ್ಥೈರ್ಯ ತುಂಬಿ ರೈತಯೋಗ ಎಂದು ಹೆಸರಿಟ್ಟಿದ್ದರು ಎಂದರು.
ಈ ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿಗೆ ಕಲ್ಲುಹಾಕುವ ಕೆಲಸ ಮಾಡುವ ಇನ್ನೊಂದು ವರ್ಗವಿದೆ. ಸಕ್ಕರೆ ಕಾರ್ಖಾನೆ ಮಾಡಲು, ರಸ್ತÉಗಳ ಅಭಿವೃದ್ದಿಗೆ ಕ್ಯಾತೆ, ರೈತರಿಗೆ ನ್ಯಾಯ ಕೊಡಿಸಬೇಕೆಂದರೆ ಕ್ಯಾತೆ ತೆಗೆದು. ಅಭಿವೃದ್ಧಿಗೆ ವಿರೋಧವಾದ ಶಕ್ತಿ. ಅಭಿವೃದ್ಧಿಯ ಪರ ಮತ್ತು ವಿರೋಧ ಶಕ್ತಿಗಳ ನಡವೆ ಸಂಘರ್ಷ ಆಗುತ್ತದೆ. ತಾವೆಲ್ಲರೂ ನಿಮ್ಮ ಮಕ್ಕಳು ಹಾಗೂ ತಾಲ್ಲೂಕಿನ ಭವಿಷ್ಯಕ್ಕಾಗಿ ಅಭಿವೃದ್ಧಿ ಪರವಾಗಿ ಅಂದರೆ ಬಿಜೆಪಿಗೆ ಮತ ಹಾಕಬೇಕು ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಸೋಲು ಗ್ಯಾರಂಟಿಯಾಗಿ ಅವರು ಹತಾಶರಾಗಿದ್ದಾರೆ. ಸ್ವಜನಪಕ್ಷಪಾತದಿಂದ ಕೂಡಿ, ದೌರ್ಭಾಗ್ಯದ ಯೋಜನೆಗಳನ್ನು ನೀಡಿದ ಕಾರಣ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಅನ್ನಭಾಗ್ಯ ಯೋಜನೆಯಲ್ಲಿ 30 ರೂ. ನರೇಂದ್ರ ಮೋದಿಯವರ ಅಕ್ಕಿ, 3 ರೂ.ಗಳ ಚೀಲದಲ್ಲಿ ಇವರ ಫೋಟೋ ಹಾಕಿದ್ದಾರೆ. ಇವರು ಮುನ್ನವೂ ಪ್ರತಿ ಕುಟುಂಬಕ್ಕೆ 30 ಕೆ,ಜಿ ಅಕ್ಕಿ ಸಿಗುತ್ತಿತ್ತು. ಅದನ್ನು 7 ಕೆ.ಜಿಗೆ ಇಳಿಸಿದರು. ಒಂದೇ ವರ್ಷ 7 ಕೆಜಿ ಕೊಟ್ಟು ಆಮೇಲೆ 4 ಕೆಜಿ ಅಕ್ಕಿ ನೀಡಿದರು. ಚುನಾವಣೆ ಹತ್ತಿರ ಬಂದಾಗ ಪುನ: 7 ಕೆ.ಜಿಗೆ ಏರಿಸಿದರು. ಈ ರೀತುಯ ಮೋಸ ಮಾಡುವ ಸರ್ಕಾರ ಎಮದೂ ನೋಡಿರಲಿಲ್ಲ. ಜನರಿಗೆ ಮೋಸ ಮಾಡಿ ದಾರಿ ತಪ್ಪಿಸುವ ಇವರಿಗೆ ನಾಚಿಕೆಯಾಗಬೇಕು.ಅನ್ನದಲ್ಲಿ ಕನ್ನ ಹಾಕಿದರು. ಇದನ್ನು ತನಿಖೆ ಮಾಡುತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ಉತ್ತರ ಪ್ರದೇಶದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ಧರು ಎಂದರು.
ದೀನದಲಿತರ ಹಾಸಿಗೆ ದಿಂಬಿನಲ್ಲಿ ಭ್ರಷ್ಟಾಚಾರ ಮಾಡಿದರು. ಸಣ್ಣ ನೀರಾವರಿಯಲ್ಲಿ 40 ಕೋಟಿ ಗಿಂತ ಹೆಚ್ಚು ಹಣವನ್ನು ಒಂದೇ ತಾಲ್ಲೂಕಿನಲ್ಲಿ ಕೆಲಸ ಮಾಡದೇ ಬಿಲ್ಲು ತೆಗದರು. ಅಧಿಕಾರಿಗಳು ಇದಕ್ಕಾಗಿ ಅಮಾನತುಗೊಂಡರು. ಎಲ್ಲಿ ಕೈಹಾಕಿದರಲ್ಲಿ ಭ್ರಷ್ಟಾಚಾರದ ಹಗರಣಗಳು. ಸುಮಾರು 59 ಪ್ರಕರಣಗಳನ್ನು ಮುಚಗ್ಚಿಹಾಕಲು ಲೋಕಾಯುಕ್ತವನ್ನೇ ಮುಚ್ಚಿಹಾಕಿದರು. ಒಂದು ಸ್ವತಂತ್ರ ಸಂಸ್ಥೆಯನ್ನು ಮುಚ್ಚಿಹಾಕಿ ಕೈಗೊಂಬೆಯಾಗಿರುವ ಎಸಿಬಿ ಪ್ರಾರಂಭಿಸಿದರು. ನಾವು ಪುನ: ಲೋಕಾಯುಕ್ತವನ್ನು ಪ್ರಾರಂಭ ಮಾಡಿದ್ದು 59 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ನೀಡುತ್ತಿದ್ದೇವೆ. ಕಾಂಗ್ರೆಸ್ ಬಣ್ಣ ಬಯಲಾಗಲಿದೆ. ನಿಮ್ಮ ಭ್ರಷಾಚಾರ ಜನರಿಗೆ ಗೊತ್ತಾಗಲಿದೆ. ತನಿಖೆ ಎದುರಿಸುವುದು ಬಿಟ್ಟು ಆಪಾದನೆಮಾಡಿದವರ ಮೇಲೆ ಮತ್ತೆ ಆಪಾದನೆ ಮಾಡುತ್ತಾರೆ. ಡಾ: ಸುಧಾಕರ್ ಅವರು 35 ಸಾವಿರ ಕೋಟಿ ರೂ.ಗಳ ಅವ್ಯವಹಾರವಾಗಿದೆ ಎಂದು ಸಿಜೆಐ ತಿಳಿಸಿದ್ದನ್ನು ಹೇಳಿದಾಗ ದಿಗಿಲಾಗ ವೈಯಕ್ತಿಕವಾಗಿ ಟೀಕೆ ಮಾಡುತ್ತಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ಬಾಯಿಗೆ ಬಂದಂತೆ ಬೈದು ಈಗ ಅವರ ಜೊತೆಗೇ ಸೇರಿದ್ದಾರೆ. ಆಪಾದನೆಗಳಿಗೆ ಉತ್ತರ ನೀಡಲು ಸಾಧ್ಯವಾಗಿಲ್ಲ ಅವರಿಗೆ. ದುರಾಡಳಿತ ಬೇರೆ, ಭ್ರಷ್ಟಾಚಾರ ಬೇರೆ ಯನ್ನುತ್ತಾರೆ. ದುರಾಡಳಿತದಿಮದ ಭ್ರಷ್ಟಾಚಾರವಾದರೆ ಅದು ಅಭ್ರಷ್ಟಾಚಾರವಲ್ಲವೇ? . ಕರ್ನಾಟಕ ಜನತೆ ಕಾಂಗ್ರೆಸ್ ಆಡಳಿತವನ್ನು ನೋಡಿ ಮನೆಗೆ ಕಳಿಸಿದ್ದಾರೆ. ಅವರಿಗೆ ಅದೇಖಾಯಂ ಜಾಗ. ಭಾಜಪ 2023 ರಲ್ಲಿ ತನ್ನದೇ ಸ್ಪಷ್ಟ ಬಹುಮತದಿಂದ ಮತ್ತೊಮ್ಮೆ ಅಧಿಕಾರಕ್ಕೆ ಬಂದು ಜನಪರ, ಜನೋಪಯೋಗಿ ಸರ್ಕಾರ ರಚಿಸಿ, ಕರ್ನಾಟಕವನ್ನು ದೇಶದಲ್ಲಿಯೇ ನಂ.1 ರಾಜ್ಯವನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದೇವೆ. . ಹಿರೇಕೆರೂರಿನ ಜನ ತೋರಿಸಿದ ದಿಕ್ಕಿನತ್ತ ಕರ್ನಾಟಕದ ರಾಜಕೀಯ ತಿರುಗುತ್ತದೆ. ಟೀಕೆ ಮಾಡುವವರಿಗೆ ಬೆಲೆ ಇಲ್ಲ. ನಮ್ಮ ಕೆಲಸಗಳನ್ನು ನೋಡಿ, ನವ ಕರ್ನಾಟಕದಿಂದ ನವ ಭಾರತವನ್ನು ನಿರ್ಮಾಣ ಮಾಡೋಣ ಎಂದು ತಿಳಿಸಿದರು.





















































