ಬೆಂಗಳೂರು: ಕಲ್ಲಿದ್ದಲು ಕೊರತೆಯ ಪರಿಸ್ಥಿತಿಯು ರಾಜ್ಯ ಸರ್ಕಾರದ ವೈಫಲ್ಯವಾಗಿದೆ ಎಂಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲಿದ್ದಲು ಕೊರತೆ, ವಿದ್ಯುತ್ ಕಡಿತ ವಿಚಾರವಾಗಿ ನಾನು ಕೂಡ ವಿಶ್ಲೇಷಣೆ ಮಾಡುತ್ತಿದ್ದೇನೆ. ನಮ್ಮ ಕಾಲದಲ್ಲಿ ವಿದ್ಯುತ್ ಉತ್ಪಾದನೆ ಅಗತ್ಯಕ್ಕಿಂತ ಹೆಚ್ಚಾಗಿ, ಅದನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದೆವು ಎಂದರು.
ಸದ್ಯ ತನಗೆ ಬಂದಿರುವ ಮಾಹಿತಿ ಪ್ರಕಾರ ಒಂದೊಂದು ದಿನದ ಕಲ್ಲಿದ್ದಲು ಮಾತ್ರ ಇದೆ. ಇದು ರಾಜ್ಯ, ಕೇಂದ್ರ ಸರ್ಕಾರದ ವೈಫಲ್ಯ. ಕಲ್ಲಿದ್ದಲು ಕೊರತೆಗೆ ಬೇರೆ ಕಾರಣವೇನಾದರೂ ಇದೆಯೇ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಎಂದ ಡಿಕೆಶಿ, ರಾಜ್ಯದಲ್ಲಿ ವಿದ್ಯುತ್ ಅಭಾವ ಇದೆ ಎಂದು ಬಿಂಬಿಸಿದರೆ ಬಂಡವಾಳ ಹೂಡಿಕೆದಾರರು ಹಿಂಜರಿಯುತ್ತಾರೆ. ಈ ಸರ್ಕಾರ ಸತ್ತವರಿಗೇ ಪರಿಹಾರ ನೀಡಿಲ್ಲ. ಇನ್ನು ಮಳೆ ಸಂತ್ರಸ್ತರಿಗೆ ಕೊಡುತ್ತಾರೆಯೇ? ಈ ಸರಕಾರಕ್ಕೆ ಬಡವರಿಗೆ ನೆರವಾಗುವ ಅನುಭವವಾಗಲಿ, ಮನಸ್ಥಿತಿಯಾಗಲಿ ಇಲ್ಲ. ರೈತರ ಬಗ್ಗೆ ಕಾಳಜಿಯಂತೂ ಮೊದಲೇ ಇಲ್ಲ ಎಂದು ದೂರಿದರು.
ಸಿದ್ದರಾಮಯ್ಯ ಅವರು ರಾಷ್ಟ್ರ ಮಟ್ಟದ ರಾಜಕಾರಣಕ್ಕೆ ಹೋಗುವ ವಿಚಾರವಾಗಿ ನಮ್ಮ ಬಳಿ ಯಾವುದೇ ಚರ್ಚೆ ಆಗಿಲ್ಲ. ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅದು ಕೇವಲ ಊಹಾಪೋಹ ಮಾತ್ರ. ಈ ವಿಚಾರವಾಗಿ ಪಕ್ಷ ಉಂಟು, ನಮ್ಮ ಶಾಸಕಾಂಗ ಪಕ್ಷದ ನಾಯಕರು ಉಂಟು. ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದವರು ಹೇಳಿದರು.
ಇಡೀ ದೇಶದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಅವರೇ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಈಗ ರಾಹುಲ್ ಗಾಂಧಿ ಅವರೇ ಕೆಲಸ ಮಾಡುತ್ತಿದ್ದು, ಅವರ ಮುಂದಾಳತ್ವ ಬೇಕು ಎಂಬುದು ಇಡೀ ಕಾಂಗ್ರೆಸ್ ಕಾರ್ಯಕರ್ತರ ಅಪೇಕ್ಷೆ. ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ವಿಚಾರವಾಗಿ ಕೆಲವೊಂದು ಪ್ರಕ್ರಿಯೆಗಳಿವೆ. ಆ ಮೂಲಕ ಆಯ್ಕೆ ನಡೆಯುತ್ತದೆ ಎಂದು ಡಿಕೆಶಿ ಅಭಿಪ್ರಾಯ ಹಂಚಿಕೊಂಡರು.