ಬೆಂಗಳೂರು: ಜನಸಂಘದ ಬೆಳವಣಿಗೆ ಹಾಗೂ ಬಿಜೆಪಿ ಆರಂಭದಲ್ಲಿ ಅವರು ಜಗನ್ನಾಥ ರಾವ್ ಜೋಶಿ ದೊಡ್ಡ ಕೊಡುಗೆ ನೀಡಿದ ಮಹಾನ್ ವ್ಯಕ್ತಿ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು “ಕರ್ನಾಟಕ ಕೇಸರಿ” ಜಗನ್ನಾಥ ರಾವ್ ಜೋಶಿ ಅವರ 31 ನೇ ವರ್ಷದ ಪುಣ್ಯತಿಥಿ ಅಂಗವಾಗಿ ಜೋಶಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಿ.ಎಸ್. ಅರುಣ್ ಅವರು ಮಾತನಾಡಿ, ಜಗನ್ನಾಥ ರಾವ್ ಜೋಶಿ ಅವರು ಪಕ್ಷಕ್ಕಾಗಿ ಮಾಡಿದ ತ್ಯಾಗವು ಇಂದಿಗೂ ಪ್ರಸ್ತುತವಾಗಿದೆ. ಜಗನ್ನಾಥ ರಾವ್ ಜೋಶಿ, ಬಾವುರಾವ್ ದೇಶಪಾಂಡೆ, ಸಂಘದ ಹಲವು ಪ್ರಮುಖರಿಂದ ನನಗೆ ಸಂಸ್ಕಾರ ಲಭಿಸಿದೆ. ಅವರು ಮನೆಗೆ ಬಂದಾಗ ಅವರ ನಡೆನುಡಿಯನ್ನು ಗಮನಿಸುವ ಅವಕಾಶ ಲಭಿಸಿತು ಎಂದರು.
ಜಗನ್ನಾಥ ರಾವ್ ಜೋಶಿ ಅವರು ಜನಸಂಘದ ಕಾಲದಿಂದಲೇ ಪಕ್ಷದ ಬೆಳವಣಿಗೆಗೆ ಕಾರಣಕರ್ತರು. ಜನಸಂಘದ ಕಾಲದಲ್ಲಿ ಕರ್ನಾಟಕದವರಾದರೂ ಮಧ್ಯಪ್ರದೇಶದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಸಂಘಟನೆ ಬಲಪಡಿಸಲು ಅವರು ಕರ್ನಾಟಕದ ಜಿಲ್ಲೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದರು ಎಂದು ವಿವರಿಸಿದರು.
ಜೋಶಿಯವರ ಜೀವನಶೈಲಿಯನ್ನು ನಾವಿಂದು ಮೆಲುಕು ಹಾಕಿಕೊಳ್ಳಬೇಕು. ಅವರ ನಿಸ್ವಾರ್ಥ ಕಾರ್ಯದ ಮಾದರಿಯನ್ನು ನಾವು ಅಳವಡಿಸಿಕೊಳ್ಳಬೇಕು. ಅವರ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಹಾರೈಸಿದರು.
ಬಿಜೆಪಿ ರಾಜ್ಯ ಕೋಶಾಧ್ಯಕ್ಷ ಸುಬ್ಬನರಸಿಂಹ, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಕಾರ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.
























































