ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಗೆ ಎನ್.ಡಿ.ಆರ್.ಎಫ್ ಅಡಿಯಲ್ಲಿ ರಾಜ್ಯಕ್ಕೆ ಅಗತ್ಯ ನೆರವು ದೊರಕಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದಿನ ಸಚಿವ ಸಂಪುಟದ ನಂತರ ಕೇಂದ್ರ ಅಧ್ಯಯನ ತಂಡ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಆಗಮಿಸಿದ್ದು, ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಪೂರ್ವಭಾವಿ ಚರ್ಚೆ ನಡೆಸಲಾಗುವುದು. ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಯ ನಂತರ ಅಂತಿಮ ಸಭೆ ನಡೆಸಲಾಗುವುದು. ವರದಿಗಳನ್ನು ನೀಡಿ, ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ತಂಡದೊಂದಿಗೆ ಅಧಿಕಾರಿಗಳು ಪ್ರವಾಸ ಮಾಡಲಿದ್ದು ಎಲ್ಲಿ ಅತಿ ಹೆಚ್ಚು ಹಾನಿಯಾಗಿದೆ ಅಲ್ಲಿ ಭೇಟಿ ನೀಡಿ ವರದಿ ನೀಡಲಿದ್ದಾರೆ ಎಂದರು.
ಪ್ರಾಥಮಿಕ ಶಾಲೆಗಳ 6, 7 ಮತ್ತು 8 ನೆ ತರಗತಿಗಳ ಪ್ರಾರಂಭದ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ರಾಲಿ, ಚುನಾವಣೆ, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರುವ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದರು.