ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ವಿಚಾರವಾಗಿ ಚರ್ಚೆಯಿಂದ ನಾನು ಹಿಂದೆ ಸರಿಯುವುದಿಲ್ಲ. ಆದರೆ ಯಾರ ಜತೆ ಚರ್ಚೆ ಮಾಡಬೇಕು ಎಂದು ತೀರ್ಮಾನಿಸುತ್ತೇನೆ. ಬಿಜೆಪಿಯ ಭ್ರಷ್ಟಾಚಾರ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದ ವಿರುದ್ಧ ಹೋರಾಟ ಮಾಡುವುದು ನಮ್ಮ ಆದ್ಯತೆಯಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ವಿಚಾರವಾಗಿ ಚರ್ಚೆಗೆ ಸಿದ್ಧ ಎಂಬ ಸಿ.ಟಿ ರವಿ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ‘ನಾನು ಭ್ರಷ್ಟಾಚಾರದ ಚರ್ಚೆಯಿಂದ ವಾಪಸ್ ಹೋಗುವುದಿಲ್ಲ. ಈ ಚರ್ಚೆಯನ್ನು ಅಧ್ಯಕ್ಷರ ಜತೆ ಮಾಡಬೇಕೋ, ಮಾಜಿ ಮುಖ್ಯಮಂತ್ರಿಗಳ ಜತೆ ಮಾಡಬೇಕೋ ಎಂದು ತೀರ್ಮಾನ ಮಾಡುತ್ತೇನೆ ಎಂದರು.
ಸರ್ಕಾರ ಈಶ್ವರಪ್ಪ ಅವರ ಪ್ರಕರಣ ಮುಚ್ಚಿ ಹಾಕಿದ್ದು, ಈ ವಿಚಾರವಾಗಿ ಯಡಿಯೂರಪ್ಪ, ಮುಖ್ಯಮಂತ್ರಿ, ಗೃಹಸಚಿವರು ಏನೆಲ್ಲಾ ಹೇಳಿಕೆ ನೀಡಿದ್ದಾರೆ ನೀವೇ ನೋಡಿ. ಬಿ ರಿಪೋರ್ಟ್ ಸಲ್ಲಿಕೆ ಈ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರವೇ ಪ್ರಾರಂಭದಿಂದ ಪ್ರಯತ್ನ ಪಟ್ಟಿದ್ದನ್ನು ಸಾಬೀತುಪಡಿಸಿದೆ. ಹೀಗಾಗಿ ವಿರೋಧ ಪಕ್ಷದ ನಾಯಕರು ನ್ಯಾಯಾಂಗ ತನಿಖೆ ಆಗಬೇಕು ಎಂದು ಹೇಳಿದ್ದಾರೆ. ಭ್ರಷ್ಟಾಚಾರದ ತಾಂಡವಕ್ಕೆ ಯುವಕ ಬಲಿಯಾಗಿದ್ದು, ಇದೇ ರೀತಿ ಬೇರೆ ಇಲಾಖೆಗಳಲ್ಲೂ ಹಲವು ದೂರುಗಳು ಬಂದಿವೆ ಎಂದವರು ಹೇಳಿದರು.
ಸರ್ಕಾರ ಆರಂಭದಲ್ಲೇ ಕ್ಲೀನ್ ಚಿಟ್ ನೀಡಿದರೆ ಪೊಲೀಸ್ ಅಧಿಕಾರಿಗಳು ಹೇಗೆ ಕೆಲಸ ಮಾಡಲು ಸಾಧ್ಯ? ಈ ವಿಚಾರವಾಗಿ ನಾವು ಸಾಕಷ್ಟು ಮಾಹಿತಿ ಪಡೆದು ಪರಿಶೀಲಿಸಿದ್ದೇವೆ. ಮೊದಲು ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರದ ಪ್ರಕರಣ ದಾಖಲಾಗಬೇಕಿತ್ತು. ಆದರೆ ಅದನ್ನು ಮಾಡಿಲ್ಲ. ಈ ಕುರಿತು ಹೋರಾಟ ರೂಪಿಸುತ್ತಿದ್ದೇವೆ ಎಂದವರು ಹೇಳಿದರು.
ಚರ್ಚೆಗೂ ಮೊದಲು 40% ಭ್ರಷ್ಟಾಚಾರ ಪ್ರಕರಣದ ಬಗ್ಗೆ ತೀರ್ಮಾನ ಆಗಬೇಕು. ಕೋವಿಡ್ ಸಮಯದಲ್ಲಿನ ಭ್ರಷ್ಟಾಚಾರ ತೀರ್ಮಾನ ಆಗಬೇಕು. ಮಾಧ್ಯಮಗಳಲ್ಲಿ ವಿವಿಧ ಸರ್ಕಾರಿ ಹುದ್ದೆಗಳಿಗೆ ದರ ನಿಗದಿ ಮಾಡಿರುವ ಪಟ್ಟಿಯ ವರದಿ ಬಗ್ಗೆ ತೀರ್ಮಾನ ಆಗಬೇಕು. ತೋಟಗಾರಿಕಾ ಇಲಾಖೆ ಪಟ್ಟಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಪತ್ರದ ವಿಚಾರ ಇತ್ಯರ್ಥ ಆಗಬೇಕು. ಗುತ್ತಿಗೆದಾರರನ್ನು ಹೆದರಿಸುವ ಪ್ರಯತ್ನ ಮಾಡಿದರು. ಇದೆಲ್ಲವೂ ಬಗೆಹರಿಯಲಿ ‘ ಎಂದು ಡಿಕೆಶಿ ಸ್ಪಷ್ಟಪಡಿಸಿದರು.





















































