ಬೆಂಗಳೂರು: ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗೆ ಹೊಸ ರೂಪ ನೀಡಲು ಹಾಗೂ ಜನಸಾಮಾನ್ಯರ ಜೀವ ರಕ್ಷಣೆಗಾಗಿ ಆರೋಗ್ಯ ಕವಚ – 108 ರ ಸೇವೆಯನ್ನು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಮೇಲ್ದರ್ಜೆಗೇರಿಸುವ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಆರೊಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ 108-ಆರೋಗ್ಯ ಕವಚವು ತುರ್ತು ಆರೋಗ್ಯ ಸೇವೆಯನ್ನು ನೀಡುತ್ತಿದೆ. ಆಧುನಿಕ ಕಾಲದ ಆರೋಗ್ಯ ಸೇವೆಯ ಬೇಡಿಕೆಗಳಿಗೆ ಅನುಗುಣವಾಗಿ ಆಂಬ್ಯುಲೆನ್ಸ್ ಸೇವೆಯನ್ನು ಉನ್ನತೀಕರಿಸುವ ಅಗತ್ಯತೆ ಕಂಡುಬಂದಿದೆ. ಹೀಗಾಗಿ *ಹೊಸ ಮಾದರಿಯ ಆಂಬ್ಯುಲೆನ್ಸ್ ಸೇವೆ* ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆ, ಹೊಸ ಸುಧಾರಣಾ ಕ್ರಮಗಳನ್ನು ಆಂಬ್ಯುಲೆನ್ಸ್ ಸೇವೆಯಲ್ಲಿ ತರುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಹಲವು ಸಂದರ್ಭಗಳಲ್ಲಿ ರೋಗಿಯ ಜೀವ ಉಳಿಸಲು “ಗೋಲ್ಡನ್ ಅವರ್” ತುಂಬಾ ಮಹತ್ವದ್ದಾಗಿರುತ್ತದೆ. ಈ ಅವಧಿಯಲ್ಲಿ ವ್ಯಕ್ತಿಗೆ ಸರಿಯಾದ ಚಿಕಿತ್ಸೆ ನೀಡಿದರೆ ಆತನ/ಆಕೆಯ ಜೀವ ಉಳಿಯುತ್ತದೆ. ಇಂತಹ ಸೇವೆಯನ್ನು ಸಕಾಲಕ್ಕೆ ನೀಡಲು ಸರ್ಕಾರ ಬದ್ಧವಾಗಿದ್ದು, ಅದಕ್ಕಾಗಿಯೇ ಆಂಬ್ಯುಲೆನ್ಸ್ ಸೇವೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಸರ್ಕಾರ ಮುನ್ನುಡಿ ಬರೆದಿದೆ.
ಸರ್ಕಾರ ಆರೋಗ್ಯ ಕರ್ನಾಟಕ ನಿರ್ಮಿಸುವ ಉದ್ದೇಶದಿಂದ ಆರೋಗ್ಯ ವಲಯವನ್ನು ಎಲ್ಲಾ ಆಯಾಮಗಳಿಂದ ಅಭಿವೃದ್ಧಿಪಡಿಸುವ ಮಹತ್ವಕಾಂಕ್ಷೆ ಹೊಂದಿದೆ. ಈ ಹಿನ್ನೆಲೆಯಲ್ಲಿ, ತುರ್ತು ಆರೋಗ್ಯ ಸೇವೆಗೆ ಹೆಚ್ಚು ಆದ್ಯತೆ ನೀಡಿದ್ದು, ಈಗಾಗಲೇ ತಜ್ಞರ ಸಲಹಾ ಸಮಿತಿ ಹಾಗೂ ಅಧಿಕಾರಿಗಳ ಜೊತೆ ಹಲವು ಸುತ್ತಿನ ಸಭೆಗಳನ್ನು ನಡೆಸಿತ್ತು. ಆ ಬಳಿಕ ಹೊಸ ತಂತ್ರಜ್ಞಾನದ ಬಳಕೆ ಮತ್ತು ಆಂಬ್ಯುಲೆನ್ಸ್ ಆಧುನಿಕರಣಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿ ಪ್ರಕಾರ, ಒಂದು ಲಕ್ಷ ಜನಸಂಖ್ಯೆಗೆ ಒಂದು ಬೇಸಿಕ್ ಲೈಫ್ ಸಪೋರ್ಟ್ (ಬಿ.ಎಲ್.ಎಸ್.) ಆಂಬ್ಯುಲೆನ್ಸ್ ಮತ್ತು ಪ್ರತಿ 5 ಲಕ್ಷ ಜನಸಂಖ್ಯೆಗೆ ಒಂದು ಅಡ್ವಾನ್ಸ್ಡ್ ಲೈಫ್ ಸರ್ಪೋಟ್ (ಎ.ಎಲ್.ಎಸ್) ಆಂಬ್ಯುಲೆನ್ಸ್ ಇರಬೇಕು. ಒಂದು ಆಂಬ್ಯುಲೆನ್ಸ್ 24 ಗಂಟೆಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಪ್ರಕರಣಗಳನ್ನು ನಿರ್ವಹಣೆ ಮಾಡಿದರೆ ಮತ್ತು 120 ಕಿ.ಮೀ.ಗಿಂತ ಹೆಚ್ಚು ದೂರ ಕ್ರಮಿಸಿದರೆ, ಅಂತಹ ಕಡೆ ಮತ್ತೊಂದು ಆಂಬ್ಯುಲೆನ್ಸ್ ಒದಗಿಸಬೇಕಾಗುತ್ತದೆ. ಈ ಮಾರ್ಗಸೂಚಿಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರುವ ಮಹತ್ವಕಾಂಕ್ಷೆ ಸರ್ಕಾರಕ್ಕಿದೆ. ಹೀಗಾಗಿ ಆಂಬ್ಯುಲೆನ್ಸ್ ಸಂಖ್ಯೆಯನ್ನು ಪ್ರಸ್ತುತದ 710 ರಿಂದ 750ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಪೈಕಿ, 40% ಎ.ಎಲ್.ಎಸ್ ಮತ್ತು 60% ಬಿ.ಎಲ್.ಎಸ್.ಆಗಿರಲಿವೆ. ಸರ್ಕಾರ ಹೊಸದಾಗಿ 380 ಆಂಬ್ಯುಲೆನ್ಸ್ ಗಳನ್ನು ಖರೀದಿ ಮಾಡಲಿದೆ. ಈ ಪೈಕಿ, 340 ಆಂಬ್ಯುಲೆನ್ಸ್ ಗಳು ಹಳೆಯ ಆಂಬ್ಯುಲೆನ್ಸ್ ಗಳ ಬದಲಿಯಾಗಿ ಬರಲಿವೆ. ಉಳಿದ 40 ಹೊಸ ಆಂಬ್ಯುಲೆನ್ಸ್ ಗಳಾಗಿರುತ್ತವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಆಂಬ್ಯುಲೆನ್ಸ್ ಸೇವೆಯಲ್ಲಿ ಕರೆ ಕೇಂದ್ರ ಅಥವಾ ಕಮಾಂಡ್ ಸೆಂಟರ್ ಮುಖ್ಯ ಪಾತ್ರ ವಹಿಸುತ್ತದೆ. ಸಾರ್ವಜನಿಕರು ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ನಡುವೆ ಸೇತುವೆಯಂತೆ ಕೆಲಸ ಮಾಡುವ ಈ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕಾಲ್ ಸೆಂಟರ್ ನ ಸೀಟುಗಳ ಸಂಖ್ಯೆಯನ್ನು 54 ರಿಂದ 75 ಕ್ಕೆ ಏರಿಸಲಾಗುತ್ತದೆ. ಈ ಕಮಾಂಡ್ ಸೆಂಟರ್, ಆಂಬ್ಯುಲೆನ್ಸ್ ನ ಜಿಪಿಎಸ್ ಟ್ರ್ಯಾಕಿಂಗ್, ಸಿಬ್ಬಂದಿಯ ಬಯೋಮೆಟ್ರಿಕ್ ಹಾಜರಾತಿ, ಆಂಬ್ಯುಲೆನ್ಸ್ ಸೇವೆಯ ಲೈವ್ ಸ್ಟ್ರೀಮಿಂಗ್, ಆನ್ ಲೈನ್ ಮಾನವ ಸಂಪನ್ಮೂಲ ನಿರ್ವಹಣೆ, ರೋಗಿಗಳ ಆರೈಕೆಯ ಎಲೆಕ್ಟ್ರಾನಿಕ್ ದಾಖಲೆಗಳ ನಿರ್ವಹಣೆ, ಅಹವಾಲು ಸ್ವೀಕಾರ ಮೊದಲಾದ ಹೊಸ ಸೌಲಭ್ಯ ಹೊಂದಲಿದೆ.
ಹಿಂದೆ ಆಂಬ್ಯುಲೆನ್ಸ್ ನಿರ್ವಹಣೆ ಮಾಡುವ ಏಜೆನ್ಸಿಯನ್ನು ದರದ ಆಧಾರದಲ್ಲಿ ಮಾತ್ರ ಪರಿಗಣಿಸಲಾಗುತ್ತಿತ್ತು. ಈಗ ದರ ಹಾಗೂ ಗುಣಮಟ್ಟದ ಕಾರ್ಯನಿರ್ವಹಣೆಯನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗಿದೆ. ಯಾವುದೇ ಸರ್ಕಾರಕ್ಕೆ 6 ವರ್ಷಗಳ ಕಾಲ 100 ಸೀಟುಗಳ ಕಾಲ್ ಸೆಂಟರ್ ಸೇವೆ ಒದಗಿಸಿರುವುದು, ಯಾವುದೇ ಸರ್ಕಾರಕ್ಕೆ 500 ಆಂಬ್ಯುಲೆನ್ಸ್ ಗಳ ಸೇವೆ ನೀಡಿರುವುದು ಸೇರಿದಂತೆ ಹಲವು ನಿಗದಿತ ಷರತ್ತುಗಳನ್ನು ಹೊಸ ಟೆಂಡರ್ ನಲ್ಲಿ ವಿಧಿಸಲಾಗುತ್ತಿದೆ. ಅಲ್ಲದೆ, ಸೇವೆ ನೀಡುವ ಏಜೆನ್ಸಿಯವರು, ತಂತ್ರಜ್ಞಾನವನ್ನು ಬಳಸಿ ಆಸ್ಪತ್ರೆಗಳನ್ನು ಮ್ಯಾಪ್ ಮಾಡಿರಬೇಕು. ಆಂಬ್ಯುಲೆನ್ಸ್ ಸೇವೆ ನೀಡುವಾಗ ಅತಿ ಸಮೀಪದ ಆಸ್ಪತ್ರೆಯು ಸ್ವಯಂಚಾಲಿತವಾಗಿ ಆಯ್ಕೆಯಾಗುವಂತಹ ವ್ಯವಸ್ಥೆಯನ್ನು ಹೊಂದಿರಬೇಕು ಎಂಬ ಷರತ್ತು ವಿಧಿಸಲಾಗುತ್ತದೆ. ಇದರಿಂದ ಸೇವೆಯ ಗುಣಮಟ್ಟದಲ್ಲಿ ಯಾವುದೇ ಕೊರತೆಯಾಗುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.