ಗದಗ: ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ನಿನ್ನೆ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಉದ್ವೇಗಕ್ಕೆ ಒಳಗಾಗಿ ಇಬ್ಬರು ಮಹಿಳೆಯರು ವಿಷ ಸೇವಿಸಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿರುವುದು ಅತ್ಯಂತ ದುರ್ದೈವದ ಘಟನೆಯೆಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲರು ವಿಷಾದಿಸಿದ್ದಾರೆ.
ಈ ಘಟನೆಯ ಬಗ್ಗೆ ಸಂಬಂಧಿಸಿದ ಗದಗ ಜಿಲ್ಲೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಈ ರೀತಿಯ ಅವಘಡಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಮತ್ತು ಒತ್ತುವರಿ ತೆರವು ಕಾರ್ಯಾಚರಣೆ ಪ್ರಸಂಗಗಳಲ್ಲಿ ಮಾನವೀಯ ದೃಷ್ಟಿಯಿಂದ ನೋಡಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಘಟನೆಯಲ್ಲಿ ವಿಷಸೇವಿಸಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮತಿ ಸರೋಜಾ ಪಾಟೀಲ್ ಎಂಬ ಮಹಿಳೆಗೆ ಅಗತ್ಯವಿರುವ ಹೆಚ್ಚಿನ ಚಿಕಿತ್ಸೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲು ಸಚಿವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.
ಈಗಾಗಲೇ ಮೃತಪಟ್ಟ ನಿರ್ಮಲ ಪಾಟೀಲ್ ಅವರ ಕುಟುಂಬದ ಸದಸ್ಯರನ್ನು ಜಿಲ್ಲಾಧಿಕಾರಿಗಳು ಭೇಟಿಯಾಗಿದ್ದಾರೆ. ತಾವು ಕೂಡ ಸದ್ಯದಲ್ಲೇ ಅಲ್ಲಿಗೆ ತೆರಳಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳುವುದಾಗಿ ಸ್ಪಷ್ಟಪಡಿಸಿದ ಸಿ.ಸಿ. ಪಾಟೀಲರು, ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಮಾಡುವಾಗ ಯಾರಿಗೂ ಅನ್ಯಾಯವಾಗದಂತೆ ಮತ್ತು ನಿಯಮಾನುಸಾರವಾಗಿ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
ಈ ಘಟನೆಯ ಬಗ್ಗೆ ತಾವು ಈಗಾಗಲೇ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ್ದು, ಮಾನವೀಯ ದೃಷ್ಟಿಯಿಂದ ಮಹಿಳೆಯ ಕುಟುಂಬದವರಿಗೆ ಐದು ಲಕ್ಷ ರೂ ಪರಿಹಾರ ಘೋಷಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆ ಪ್ರಕಾರ ಅವರ ಕುಟುಂಬದವರಿಗೆ ಪರಿಹಾರ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿ.ಸಿ. ಪಾಟೀಲರು ತಿಳಿಸಿದ್ದಾರೆ.