ಇಡುಕ್ಕಿ(ಕೇರಳ),ಸೆ.10: ಕೇರಳದ ಇಡುಕ್ಕಿ ಸಮೀಪದ ರಾಜಮಾಲಾ ಎಂಬ ಅರಣ್ಯ ಭಾಗದಲ್ಲಿ ಸಂಭವಿಸಿದ ಘಟನೆಯೊಂದು ಸದ್ಯ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ. ಇಲ್ಲಿನ ಚೆಕ್ ಪೋಸ್ಟ್ ಬಳಿ ಚಲಿಸುತ್ತಿದ್ದ ಜೀಪಿನಿಂದ ಕೆಳಕ್ಕೆ ಬಿದ್ದು ಹೆತ್ತವರಿಂದ ತಪ್ಪಿಸಿಕೊಂಡಿದ್ದ 1 ವರ್ಷದ ಹೆಣ್ಣು ಮಗು ಮತ್ತೆ ಹೆತ್ತವರ ಮಡಿಲು ಸೇರಿದೆ.
ಕಂಬಲಿಕ್ಕಂಡಮ್ ಎಂಬ ಊರಿನ ನಿವಾಸಿಗರಾಗಿರುವ ಈ ಮಗುವಿನ ಹೆತ್ತವರು ತಮಿಳುನಾಡಿನ ಪಳನಿ ದೇಗುಲದಿಂದ ತಮ್ಮ ಊರಿಗೆ ವಾಪಸ್ಸಾಗುವ ವೇಳೆ ನಿದ್ದೆಗೆ ಜಾರಿದ ಸಂದರ್ಭದಲ್ಲಿ ಮಗು ತಾಯಿಯ ಮಡಿಲಿನಿಂದ ಕೆಳಕ್ಕೆ ಬಿದ್ದಿತ್ತು..ಆದರೆ ಇದ್ಯಾವುದನ್ನೂ ಅರಿಯದ ಹೆತ್ತವರು ಊರು ಸೇರಿದ್ದರು. ಇತ್ತ ಮಗು ಬಿದ್ದ ರಭಸಕ್ಕೆ ತಲೆ ಪೆಟ್ಟು ಮಾಡಿಕೊಂಡಿದ್ದು, ಅಂಬೆಗಾಲಿಕ್ಕಿ ರಸ್ತೆ ದಾಡಿ ಅರಣ್ಯ ಪ್ರದೇಶದತ್ತ ಅಳುತ್ತಾ ಹೊರಟಿತ್ತು. ಮಗುವಿನ ಅಳು ಕೇಳಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ, ಅತ್ತ ದೌಡಾಯಿಸಿ ಮಗುವನ್ನು ರಕ್ಷಿಸಿದ್ದಾರೆ. ಅಲ್ಲದೆ ಮಗುವು ಯಾವುದೇ ಕಾಡು ಪ್ರಾಣಿಗಳ ಪಾಲಾಗದೆ, ಯಾವುದೇ ಸಮಸ್ಯೆಗಳಿಗೆ ಸಿಲುಕದೆ ಸಿಬ್ಬಂದಿಯ ಕೈಸೇರಿತ್ತು.. ಚೆಕ್ ಪೋಸ್ಟ್ ಬಳಿಯ ಸಿಸಿಟಿವಿ ದೃಶ್ಯಗಳಿಂದ ಮಗು ಜೀಪ್ ನಿಂದ ಬಿದ್ದಿರುವುದು ತಿಳಿದುಬಂದಿದ್ದು, ಸದ್ಯ ಮತ್ತೆ ಹೆತ್ತವರ ಮಡಿಲು ಸೇರಿದೆ.